ವಿನಿವಿಂಕ್ ಶಾಸ್ತ್ರಿನೆನಪಿದ್ದಾನಾ? ಅಥವಾ ಮರೆತಿದ್ದೀರಾ?
ಸರಿಸುಮಾರು ಒಂದು ದಶಕದ ಹಿಂದೆ ವಿನಿವಿಂಕ್ ಶಾಸ್ತ್ರಿ ಕಥೆ ಅವನ ಬಹುಕೋಟಿ ಹಗರಣದ ಮಾಹಿತಿ ಮರೆತೇ ಹೋಗಿದೆ. ಇತ್ತೀಚೆಗೆ ಕೆಲವು ಕಡೆ ವಿನಿವಿಂಕ್‌ನ ಛಾಯೆ ಮರುಕಳಿಸುವ ಸಾಧ್ಯತೆ ಕಾಣುವಂತಿದೆ. ಮುಗ್ದ ಜನರನ್ನ ಎಚ್ಚರಿಸುವ ಸಲುವಾಗಿ ಹಳೆ ಕಥೆಯನ್ನ ಮತ್ತೆ ನಿಮ್ಮ ಮುಂದೆ ಇಡುವ ಪ್ರಯತ್ನ.
ಇದರಲ್ಲಿ ಬರಹಗಾರರದ್ದು ಏನು ಇಲ್ಲ ಇಲ್ಲಿರುವ ಮಾಹಿತಿಯನ್ನು ಮಾಧ್ಯಮಗಳಲ್ಲಿ ಬಂದದ್ದನ್ನು ಎಷ್ಟುಬೇಕೋ ಅಷ್ಟನ್ನ ಕಣ್ಣುಹಾಯಿಸಿದ ಮಾಹಿತಿಗಳ ಆಧಾರದ ಮೇಲೆ ನಿಮ್ಮ ಮುಂದೆ ಇಡಲಾಗಿದೆ:

ಬಹುಶಃ ಶುರು ಮಾಡಿದಾಗ ಅವನಿಗೆ ಒಳ್ಳೆಯ ಮನಸ್ಸಿತ್ತೇನೋ, ಆದರೆ ಸಮಯದ ಗತಿಗೆ ಒಳಪಟ್ಟು ಹಣದ ಮಾಯಾಜಾಲಾಕ್ಕೆ ಸಿಲುಕಿ ಮನಸ್ಸು ಹೊಯ್ದಾಡಿ, ಆಸೆಯ ಜೊಲ್ಲು ಸುರಿದು, ಮುಗ್ದ ಜನರ ಹಣವನ್ನ ಬಳಸಲು ಶುರುಮಾಡಿದ ನಡೆ ಮಾತ್ರ ಮೋಸಗಾರನದು. ಈ ಕಥೆಯ ನಾಯಕನ ಹೆಸರು ಶ್ರೀನಿವಾಸ ಶಾಸ್ತ್ರಿ, ಹೌದು, ವಿನಿವಿಂಕ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ, ಈಗ ಬೃಹತ್ ವಂಚನೆಗೆ ಹೆಸರಾಗಿರುವ ವ್ಯಕ್ತಿ. ಬಹುಕೋಟಿ ಹಗರಣದ ಸರದಾರ.
ಆರಂಭ
2005ರ ಸುಮಾರಿಗೆ ರಾಯಚೂರಿನಲ್ಲಿ, ಜನರಿಗೆ ಹಣವನ್ನು ಡಬಲ್ ಮಾಡಿಸುತ್ತೇವೆ ಎಂಬ ನಂಬಿಕೆ ಮೂಡಿಸಿ ಶಾಸ್ತ್ರಿಯು ತನ್ನ 'VinivInc Souharda Cooperative Society' ಎಂಬ ಕಂಪನಿಗೆ ಭಾರೀ ಹೂಡಿಕೆಯನ್ನು ಸೆಳೆದ. ಪ್ರತಿಯೊಬ್ಬ ಹೂಡಿಕೆದಾರನಿಗೆ ತಿಂಗಳಿಗೆ 10% ಬಡ್ಡಿ ನೀಡುವುದಾಗಿ ಭರವಸೆ ನೀಡಿದ. ನೂರಾರು ಜನರು ತಮ್ಮ ಬದುಕಿನ ಉಳಿತಾಯ, ಇನ್ನೂ ಕೆಲವರು ಕುಟುಂಬದ ಬೆಲೆಬಾಳುವ ಆಸ್ತಿಯನ್ನು ತಂದು ಬಡ್ಡಿಯ ಆಸೆಗೆ ತಂದು ಸುರಿದರು.
ವಂಚನೆಯ ಜಾಲ:
ಕುರಿನೂ ಕೊಟ್ಟು ದುಡ್ಡು ಕೊಟ್ಟು ಬಿರಿಯಾನಿ ತಿಂದಂಗಾಯ್ತು, ಬಡ್ಡಿ ನೀಡುವ ಆಸೆ ತೋರಿಸಿ ಜನರ ಮನದ ಕಾಮನೆಯನ್ನ ಬಡಿ(ಡ್ಡಿ)ದೆಬ್ಬಿಸಿ ಈ ಮೂಲಕ ಸುಮಾರು 20,184 ಹೂಡಿಕೆದಾರರಿಂದ 203 ಕೋಟಿ ರೂಪಾಯಿ ವಂಚಿಸಿದನು. ಈ ಸಂಬಂಧದಲ್ಲಿ ಪ್ರಕರಣಗಳು ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ದಕ್ಷಿಣ ಕನ್ನಡ, ರಾಯಚೂರಿನಲ್ಲೆಲ್ಲ ದಾಖಲಾಗಿದವು.
ಅವಧಿ ಮರೆಮಾಚಿದ ಜಾಣ:
ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾ, ತನ್ನ ಕುಟುಂಬದವರೊಂದಿಗೆ ದೇಶಾದ್ಯಂತ ಅಲೆದಾಡಿ ಶ್ರೀನಿವಾಸ ಶಾಸ್ತ್ರಿ ಕೆಲ ವರ್ಷಗಳ ಕಾಲ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿ 2008ರ ಆಗಷ್ಟ್‌ನಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ವೈಜಾಗ್‌ನಲ್ಲಿ ಬಂಧನಕ್ಕೊಳಗಾದ. ನಂತರದ ದಿನಗಳಲ್ಲಿ ನ್ಯಾಯಾಲಯದಲ್ಲಿ ತನ್ನ ಬಂಧನದಿಂದ ರಕ್ಷಣೆಗಾಗಿ ಶ್ರಮಿಸಿದನು. ಆತ "ನಾನು ಈಗಾಗಲೇ ₹175 ಕೋಟಿ ಹಿಂತಿರುಗಿಸಿದ್ದೇನೆ" ಎಂದು ನ್ಯಾಯಾಲಯಕ್ಕೆ ಹೇಳಿದ. ಜೊತೆಗೆ ತನ್ನ ಬಳಿ ₹400 ಕೋಟಿ ಮೌಲ್ಯದ ಆಸ್ತಿ ಇದೆ ಎಂದಿದ್ದ. ಶಾಸ್ತ್ರಿಯನ್ನ ಸೆರೆಹಿಡಿದ ರೋಚಕ ಕಥೆ ಇಲ್ಲಿದೆ ನೋಡಿ.
ಆಸ್ತಿಗಳ ಹರಾಜು:
ಅವನಿಗೆ ಸೇರಿದ ಎಲ್ಲಾ ಕಾರುಗಳು ಹಾಗೂ ಮೈಸೂರಿನ ಮಾರುತಿನಗರದಲ್ಲಿನ ಪ್ಲಾಟ್‌ಗಳು ಹರಾಜು ಮಾಡಲ್ಪಟ್ಟವು. ಕಾರು ಹರಾಜಿನಲ್ಲಿ ಒಂದರಲ್ಲೇ ₹15 ಕೋಟಿ ಹಣ ಸಂಗ್ರಹವಾಯಿತು. ಹೋಂಡಾ ಸಿಟಿ, ಟೊಯೋಟಾ ಕೊರೊಲ್ಲಾ, ಟಾಟಾ ಇಂಡಿಗೋ ಮೊದಲಾದ ಕಾರುಗಳು ಹರಾಜಾದವು.
ಶಾಸ್ತ್ರಿಯ ಪಿತೃಶ್ರಾದ್ಧದ ನಿಮಿತ್ತ 2010ರಲ್ಲಿ ಕರ್ನಾಟಕ ಹೈಕೋರ್ಟ್ ಆತನಿಗೆ ತಾತ್ಕಾಲಿಕ ಅನುಮತಿ ನೀಡಿತು. ಪರಪ್ಪನ ಅಗ್ರಹಾರ ಜೈಲಿನಿಂದ ವಿಶೇಷ ಭದ್ರತೆಯೊಂದಿಗೆ ಕಳಿಹಿಸಿ, ಪುನಃ ಸಂಜೆ ಹಿಂದಿರುಗಿಸಲು ನ್ಯಾಯಾಲಯ ಆದೇಶಿಸಿತ್ತು.
ಕೊನೆ ಹನಿ:
ವಿನಿವಿಂಕ್ ಶಾಸ್ತ್ರಿ ಎಂಬ ಹೆಸರು ಈಗ ವಿಶ್ವಾಸವಿಲ್ಲದ ವ್ಯವಹಾರದ ಪ್ರತೀಕವಾಗಿದೆ. ಜನರ ನಂಬಿಕೆಯನ್ನು ಹುಸಿ ನಗೆ ಹಾಕಿ ಹಣದ ಮಾಯಾಜಾಲದಲ್ಲಿ ಸಿಲುಕಿಸಿದ ಶಾಸ್ತ್ರಿ ಆತ, ಇದು ಇವತ್ತಿಗೂ ಇಂತಹ ಪೊಳ್ಳು ಬರವಸೆ ಕೊಟ್ಟರೂ ಹಣ ಹೂಡಲು ತೊಡಗುವವರಿದ್ದಾರೆ, ಹಾಗಾಗಿ ಅವರ ಸಲುವಾಗಿ ಬರೆದ ಲೇಖನ. ಇದನ್ನ ಓದಿದ ಒಬ್ಬರಲ್ಲಿ ಜಾಗೃತೆಯಾದರೆ ಇದರ ಶ್ರಮ ಸಾರ್ಥಕ. ನಿಮಗನ್ನಿಸಿದ್ದನ್ನ ನೇರವಾಗಿ ಕಮೆಂಟ್ ಬಾಕ್ಸನಲ್ಲಿ ಬರೆಯುವುದನ್ನ ಮತ್ತು ನಿಮ್ಮ ಆತ್ಮೀಯರಿಗೆ ಷೇರ್ ಮಾಡುವುದನ್ನ ಮರೆಯದೆ ನೆನಪಿಸಿಕೊಳ್ಳಿ.
ನಮಸ್ಕಾರ
--ಹಳ್ಳಿ ನ್ಯೂಸ್
0 Comments:
ಕಾಮೆಂಟ್ ಪೋಸ್ಟ್ ಮಾಡಿ