ವಿಶೇಷ ವರದಿ | Special Report
ಉಚ್ಚ ನ್ಯಾಯಾಲಯದ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆಯ ವಿಶೇಷ ಕಟ್ಟಡ ಉಪವಿಭಾಗದ ಸಿಬ್ಬಂದಿಗಳು ಸರ್ಕಾರಿ ಕಛೇರಿಯಲ್ಲಿ ನಿಯಮಬಾಹಿರವಾಗಿ ಹುಟ್ಟುಹಬ್ಬ ಆಚರಿಸಿದ್ದರಿಂದ ಐವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಈ ಬಗ್ಗೆ ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿದೆ.

ಬೆಂಗಳೂರು: ದಿನಾಂಕ 10-03-2025ರಂದು ಉಚ್ಚ ನ್ಯಾಯಾಲಯದ ಕಟ್ಟಡದಲ್ಲಿನ ಕಛೇರಿಯಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ, ಸಹಾಯಕ ಇಂಜಿನಿಯರ್ ಶ್ರೀಮತಿ ಮೀನಾ ಅವರ ಹುಟ್ಟುಹಬ್ಬವನ್ನು ಗುಪ್ತವಾಗಿ ಆಚರಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಭದ್ರತಾ ನಿಯಮಗಳ ಉಲ್ಲಂಘನೆಗೆ ದಾರಿ ಮಾಡಿಕೊಟ್ಟಿದೆ ಎಂದು ತನಿಖಾ ವರದಿಗಳು ತಿಳಿಸಿವೆ.
ಭದ್ರತಾ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿರುವ ನ್ಯಾಯಾಲಯದ ಆವರಣದಲ್ಲಿ ಮೇಲ್ಮಟ್ಟದ ಅನುಮತಿ ಇಲ್ಲದೆ ಈ ರೀತಿಯ ಕಾರ್ಯಕ್ರಮವನ್ನು ನಡೆಸಿದ್ದರಿಂದ ಕಛೇರಿಯ ಶಿಸ್ತು ಮತ್ತು ಭದ್ರತೆಗೆ ಗಂಭೀರ ಧಕ್ಕೆಯಾಗಿದೆ ಎಂದು ವಿಚಾರಣಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಆಚರಣೆಯಲ್ಲಿ ಹಿರಿಯ ಸಹಾಯಕ ಇಂಜಿನಿಯರ್‌ಗಳಾದ ಶ್ರೀಮತಿ ಲಾವಣ್ಯ, ಶ್ರೀ ನವೀನ್, ಶ್ರೀ ಅಮೀನ್ ಎಸ್. ಆನದಿನ್ನಿ, ಪ್ರಥಮ ದರ್ಜೆ ಸಹಾಯಕ ಶ್ರೀ ಜಿ.ಹೆಚ್. ಚಿಕ್ಕಗೌಡ ಹಾಗೂ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರ ಬಗ್ಗೆ ವರದಿಯಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಿ, ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುತ್ತಾರೆ.
ನ್ಯಾಯಾಲಯದ ಕಟ್ಟಡವು ಸೂಕ್ಷ್ಮ ಭದ್ರತಾ ಪ್ರದೇಶವಾಗಿರುವುದರಿಂದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲು ಮೇಲ್ಮಟ್ಟದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಈ ನಿಯಮವನ್ನು ಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿದೆ. ಇದಲ್ಲದೆ, ಭದ್ರತಾ ವ್ಯವಸ್ಥೆಯ ಅಂಶವಾಗಿ ಅಳವಡಿಸಲಾದ ಸಿ.ಸಿ. ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಭದ್ರತಾ ಲೋಪವನ್ನುಂಟು ಮಾಡಲಾಗಿದೆ. ಈ ಕೃತ್ಯವು ಕೇವಲ ಕಾನೂನುಬದ್ಧವಲ್ಲದೆ ಭದ್ರತೆಯ ಬಗ್ಗೆ ಗಂಭೀರ ನಿರ್ಲಕ್ಷ್ಯವನ್ನೂ ಸೂಚಿಸುತ್ತದೆ. ಸರ್ಕಾರಿ ನೌಕರರಿಂದ ನಿರೀಕ್ಷಿಸಬಲ್ಲ ಶಿಸ್ತುಬದ್ಧ, ಪ್ರಾಮಾಣಿಕ ಹಾಗೂ ಪಾರದರ್ಶಕ ವರ್ತನೆಗೆ ವಿರುದ್ಧವಾಗಿ, ಈ ಸಂದರ್ಭದಲ್ಲಿ ತರವಲ್ಲದ ಮತ್ತು ಅನುರೂಪವಲ್ಲದ ವರ್ತನೆ ಪ್ರದರ್ಶಿಸಲಾಗಿದೆ. ಕಛೇರಿ ಶಿಸ್ತಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಈ ಕೃತ್ಯ ನಡೆದಿದ್ದು, ಸರ್ಕಾರಿ ಸೇವೆಯ ಸಿದ್ಧಾಂತಗಳಿಗೆ ಆಘಾತ ಉಂಟುಮಾಡುತ್ತದೆ. ಈ ರೀತಿಯ ಘಟನೆಗಳು ಇತರ ಉದ್ಯೋಗಸ್ಥರಿಗೆ ತಪ್ಪು ಸಂದೇಶವನ್ನು ಹರಡುತ್ತವೆ ಹಾಗೂ ಕಛೇರಿಯ ಶಿಸ್ತುಪಾಲನೆಯನ್ನೂ ಕುಂದಿಸಬಹುದು. ಆದ್ದರಿಂದ, ಈ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಗೊಳಪಡದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು
ಉಚ್ಚ ನ್ಯಾಯಾಲಯದ ಕಛೇರಿಯಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ ಸಹಾಯಕ ಇಂಜಿನಿಯರ್ ಶ್ರೀಮತಿ ಮೀನಾ ಅವರ ಹುಟ್ಟುಹಬ್ಬವನ್ನು ಗುಪ್ತವಾಗಿ ಆಚರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತೀವ್ರ ಗಮನ ಹರಿಸಿ, ಈ ಘಟನೆಗೆ ಸಂಬಂಧಿಸಿದಂತೆ ಐವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಅಮಾನತು ಮಾಡಲಾದ ಅಧಿಕಾರಿಗಳಲ್ಲಿ ಸಹಾಯಕ ಇಂಜಿನಿಯರ್‌ಗಳಾದ ಶ್ರೀಮತಿ ಲಾವಣ್ಯ, ಶ್ರೀಮತಿ ಮೀನಾ, ಶ್ರೀ ನವೀನ್, ಶ್ರೀ ಅಮೀನ್ ಎಸ್. ಆನದಿನ್ನಿ ಹಾಗೂ ಪ್ರಥಮ ದರ್ಜೆ ಸಹಾಯಕ ಶ್ರೀ ಜಿ.ಹೆಚ್. ಚಿಕ್ಕಗೌಡ ಅವರ ಹೆಸರಿದೆ. ನ್ಯಾಯಾಲಯದಂತಹ ಭದ್ರತಾ ಮಹತ್ವವಿರುವ ಸ್ಥಳದಲ್ಲಿ ನಿರ್ಬಂಧಿತ ಕಾರ್ಯಕ್ರಮ ನಡೆಸಿರುವುದು, ಸಿ.ಸಿ. ಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿರುವುದು ಮತ್ತು ಕಛೇರಿ ಶಿಸ್ತು ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದೆ.
ಅಮಾನತ್ತಿನ ಅವಧಿಯಲ್ಲಿ ಈ ಅಧಿಕಾರಿಗಳು ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ಮುಂದುವರಿದಿದ್ದು, ತನಿಖೆಯ ಫಲಿತಾಂಶದ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.
ಈ ಪ್ರಕರಣಕ್ಕೆ ಅನ್ವಯಿಸುವ ಕಾನೂನುಗಳ ಅನ್ವಯದಲ್ಲಿ ವಿವಿಧ ನಿಯಮಗಳ ಉಲ್ಲಂಘನೆಯು ಕಂಡುಬಂದಿದೆ. ಪ್ರಥಮವಾಗಿ, ಕರ್ನಾಟಕ ನಾಗರೀಕ ಸೇವಾ (CCS) ನಿಯಮಗಳು, 1957ರ ಪ್ರಕಾರ, ನಿಯಮ 10(1)(d) ನಲ್ಲಿ ಸರ್ಕಾರಿ ನೌಕರರನ್ನು ಅಮಾನತ್ತುಗೊಳಿಸುವ ಅಧಿಕಾರವನ್ನು ನಿರ್ಧರಿಸಲಾಗಿದೆ ಮತ್ತು ನಿಯಮ 98 ರಲ್ಲಿ ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ನೀಡುವ ಬಗ್ಗೆ ವಿಧಿಸಲಾಗಿದೆ. ಎರಡನೆಯದಾಗಿ, ಕರ್ನಾಟಕ ರಾಜ್ಯ ನಾಗರೀಕ ನಡತೆ ನಿಯಮಗಳು, 2021ರ ನಿಯಮ 3(1)(A) ಮತ್ತು (B) ಶಿಸ್ತು ಹಾಗೂ ಸರ್ಕಾರಿ ಸಂಪತ್ತಿನ ರಕ್ಷಣೆಗೆ ಸಂಬಂಧಿಸಿದೆ. ಅಲ್ಲದೇ, ನಿಯಮ 16ರ ಪ್ರಕಾರ ಸರ್ಕಾರಿ ಕಛೇರಿಗಳಲ್ಲಿ ವೈಯಕ್ತಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮೂರನೆಯದಾಗಿ, ಭಾರತೀಯ ದಂಡ ಸಂಹಿತೆ (IPC), 1860ರ ಸೆಕ್ಷನ್ 120B ಅಡಿಯಲ್ಲಿ ಸಂಚು ರೂಪಿಸುವುದು ಮತ್ತು ಸೆಕ್ಷನ್ 217 ಅಡಿಯಲ್ಲಿ ಭದ್ರತಾ ನಿಯಮಗಳ ಉಲ್ಲಂಘನೆಯು ಅಪರಾಧವಾಗಿರುವುದನ್ನು ಸೂಚಿಸುತ್ತದೆ. ಈ ಎಲ್ಲಾ ಕಾನೂನು ನಿಯಮಗಳ ಚೌಕಟ್ಟಿನಲ್ಲಿ ಪ್ರಕರಣವನ್ನು ಪರಿಗಣಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.
ಈ ಘಟನೆಯು ಸರ್ಕಾರಿ ಕಛೇರಿಗಳಲ್ಲಿ ಶಿಸ್ತು ಮತ್ತು ನಿಯಮಗಳ ಪಾಲಿಸುವುದು ಎಷ್ಟು ಮುಖ್ಯ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
0 Comments:
ಕಾಮೆಂಟ್ ಪೋಸ್ಟ್ ಮಾಡಿ