
ಇಂದು ಯಲ್ಲಾಪುರ ತಾಲೂಕಿನಾದ್ಯಂತ ಎಲ್ಲಾ ಕಡೆಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮಗಳು ಜರುಗಿದವು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭರಣಿಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ, ಶಾಲಾ ಸಮುದಾಯದ ಶಾಲಾ ಕಾರ್ಯಕ್ರಮ, 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ 60 ವರ್ಷ ಪೂರೈಸಿದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿದ ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎನ್. ಆರ್. ಹೆಗಡೆಯವರು ಶೈಕ್ಷಣಿಕ ಪ್ರಗತಿಗೆ ಸ್ಮಾರ್ಟ್ ಕ್ಲಾಸ್ ಸಹಕರಿಸುತ್ತದೆ ಎಂದು ತಿಳಿಸಿದರು. ಈಗಾಗಲೇ ತಾಲೂಕಿನಾದ್ಯಂತ ಅನೇಕ ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ಪ್ರಾರಂಭಿಸಿದ್ದು, ಈ ಶಾಲೆಯಲ್ಲಿಯೂ ಎಸ್.ಡಿ.ಎಮ್.ಸಿ.ಯವರ, ಪಾಲಕರ, ಊರ ಹಿರಿಯರ, ಶಿಕ್ಷಣ ಪ್ರೇಮಿಗಳ ಹಾಗು ಶಿಕ್ಷಕರ ಮತ್ತು ಸೆಲ್ಕೋ ಸೋಲಾರ್ ಆ್ಯಂಡ್ ಲೈಟ್ ಸಿಸ್ಟಮ್ ಇವರ ಸಹಕಾರದೊಂದಿಗೆ ಇದು ಸಾಧ್ಯವಾಗಿದೆ ಎಂದರು.
ಮುಂದುವರೆದು ಸರಕಾರದಿಂದ ಸಿಗುವ ಸವಲತ್ತುಗಳು ಶಾಲೆಯಲ್ಲಿ ಸರಿಯಾಗಿ ಉಪಯೋಗವಾದರೆ ನಮ್ಮ ದೇಶದ ಭದ್ರಬುನಾದಿ ಕಟ್ಟಿದಂತಾಗುತ್ತದೆ ಎಂದು ಎಲ್ಲರ ಜವಾಬ್ದಾರಿಗಳ ಕುರಿತು ಮಾತನಾಡಿದರು. ಸಭೆಯಲ್ಲಿ ಹಾಜರಿದ್ದ ತಾಲೂಕಿನ ಪ್ರೌಢ ಬಿಆರ್ಪಿಗಳಾದ ಶ್ರೀ ಪ್ರಶಾಂತ ಪಟಗಾರರು ಮಾತನಾಡಿ ಪಾಲಕರು ವಿದ್ಯಾರ್ಥಿಗಳನ್ನು ಹೆತ್ತರೆ ಶಾಲೆಗಳಲ್ಲಿ ಶಿಕ್ಷಕರು ಅವರ ಜೀವನವನ್ನು ರೂಪಿಸುತ್ತಾರೆ ಎಂದು ಹೇಳಿದರು.
ವಿದ್ಯಾರ್ಥಿಗಳ ಜೀವನವನ್ನು ಕಟ್ಟುವುದು ಸೃಷ್ಟಿಗೆ ಸಮ. ಮುಂದುವರೆದ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ನಮ್ಮ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಇರುವ ವ್ಯತ್ಯಾಸವೆಂದರೆ ಸಿಗುವ ಅವಕಾಶಗಳು ಮತ್ತು ಸೌಲಭ್ಯಗಳು ಎಂದು ಹೇಳುತ್ತಾ ಸ್ಮಾರ್ಟ್ ಕ್ಲಾಸ್ ಇದು ನೋಡಿ ಮಾಡಿ ಕಲಿಯುವ ವಿದ್ಯಾರ್ಥಿಗಳಿಗೆ ವೇಗವಾಗಿ ಕಲಿಯಲು ತುಂಬಾ ಸಹಕಾರಿ. ಇಂತಹ ಸೌಲಭ್ಯಗಳನ್ನು ಒದಗಿಸಿ ಕೊಟ್ಟಂತಹ ಶಾಲೆಯ ಶಿಕ್ಷಕರಿಗೆ, ಎಸ್‌ಡಿಎಂಸಿ ಅವರಿಗೆ, ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು.
ವಿದ್ಯಾರ್ಥಿಗಳನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ಅವರ ಆತ್ಮವಿಶ್ವಾಸ, ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಬೇಕಾದಂತಹ ಅವಕಾಶಗಳನ್ನು ಮಾಡಿಕೊಡುವ ಜವಾಬ್ದಾರಿ ಶಾಲೆಗಳದ್ದು ಹಾಗೂ ಪೋಷಕರದ್ದು ಎಂದು ತಿಳಿಸಿದರು.
ಸಭೆಯಲಿದ್ದ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಗಣೇಶ್ ಹೆಗಡೆಯವರು ಮಾತನಾಡಿ ವಿದ್ಯಾರ್ಥಿಗಳನ್ನು ಮಕ್ಕಳನ್ನು ಸದೃಢ ಪ್ರಜೆಗಳನ್ನಾಗಿ, ಉತ್ತಮ ಅಭ್ಯಾಸಗಳೊಂದಿಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವವರಾಗಿ ರೂಪಿಸಬೇಕೆಂದು ಒತ್ತು ಹೇಳಿದರು.
ಮುಖ್ಯ ಶಿಕ್ಷಕರಾದ ಶ್ರೀ ವಿನಾಯಕ ಗೌಡರವರು ಕಾರ್ಯಕ್ರಮವನ್ನು ನಿರೂಪಿಸುತ್ತಾ ಸ್ವಾಗತಿಸುತ್ತ ಶಾಲೆಯ ಹಿನ್ನೆಲೆ, ಇತಿಹಾಸ, ಸದ್ಯದ ಸ್ಥಿತಿಗತಿಗಳನ್ನು, ಕುಂದು ಕೊರತೆಗಳನ್ನ, ಇರುವ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ತಿಳಿಸಿ ಹೇಳುತ್ತಾ ಶಾಲೆಗಾಗಿ ದೇಣಿಗೆ ನೀಡಿ ಸಹಕರಿಸಿದ ಎಲ್ಲಾ ಮಾನ್ಯರನ್ನು ವೈಯಕ್ತಿಕವಾಗಿ ಹೆಸರನ್ನ ನೆನಪಿಸಿಕೊಂಡು ಅವರಿಗೆ ಧನ್ಯವಾದಗಳನ್ನ ಅರ್ಪಿಸಿದರು. ಮುಂದೆಯೂ ಕೂಡ ಇದೇ ರೀತಿ ಸಹಕಾರ ವನ್ನ ನೀಡಬೇಕೆಂದು ವಿನಂತಿಸಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಶುಭ ಕೋರಿದರು. ಅಕ್ಷರ ದಾಸೋಹದ ಕಾರ್ಯಕ್ರಮದಲ್ಲಿ 2003ರಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿ 60 ವರ್ಷಗಳು ತುಂಬಿದ ನಿಮಿತ್ತ ನಿವೃತ್ತಿ ಹೊಂದಿದ ಶ್ರೀಮತಿ ಜಾನಕಿ ದೇವಾಡಿಗ ಹಾಗೂ ನೇತ್ರಾವತಿ ನಾಯ್ಕ ಇವರಿಗೆ ಹೃದಯಸ್ಪರ್ಶಿ ಬಿಳ್ಕೊಡುಗೆಯನ್ನ ನೆರವೇರಿಸಿದರು.
ಶಿಕ್ಷಣ ಸಂಯೋಜಕರಾದ ಶ್ರೀ ಪ್ರಶಾಂತ್ ಜಿ.ಎನ್., ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿಷ್ಣು ಭಟ್, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶಿಕ್ಷಕಿಯರಾದ ಕು. ಗೌರಮ್ಮ ವಂದಿಸಿದರು
0 Comments:
ಕಾಮೆಂಟ್ ಪೋಸ್ಟ್ ಮಾಡಿ