ಉತ್ತರ ಕನ್ನಡದ ಸಿದ್ಧಿಗಳು

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ | Special Report

ಕರ್ನಾಟಕ ಅನೇಕ ಜನರ, ಜನಾಂಗದ, ಭಾಷೆಗಳ, ಸಂಸ್ಕೃತಿಯ, ಆಚರಣೆಗಳ ತವರೂರಾಗಿದೆ. ಮೂಲ ಕನ್ನಡದ ಅಸ್ತಿತ್ವಕ್ಕೆ ಅದರ ಉಳಿವಿಗೆ ಎಲ್ಲರ ಕೊಡುಗೆಗಳೂ ಅನನ್ಯ. ಒಮ್ಮೆ ಇಲ್ಲಿಗೆ ಬಂದವರು ಕನ್ನಡ ನಾಡನ್ನ ಬಿಟ್ಟು ಹೋಗಲೊಲ್ಲರು. ಮಂಕುತಿಮ್ಮನ ಕಗ್ಗದಲ್ಲಿ ಬರುವ llಎಲ್ಲರೊಳಗೊಂದಾಗು ಮಂಕುತಿಮ್ಮll ಎಂಬಂತೆ ಇಲ್ಲಿನ ಮಣ್ಣಿನ ವಾಸನೆಯೊಂದಿಗೆ ಬೆರೆತು ಹೋಗಿದ್ದಾರೆ


Special News

ಕನ್ನಡ ಜನರ ಹೃದಯವೈಶಾಲ್ಯತೆಗೆ ಪುರಾವೆಗಳು ಎಲ್ಲಾಕಡೆ ಕಂಡುಬರುತ್ತದೆ, ಬಹುಶಃ ದೇಶದ ಉಳಿದೆಲ್ಲ ಭಾಷಿಕರಿಗೆ ಹೋಲಿಸಿದರೆ ಎಲ್ಲರನ್ನ ಅಪ್ಪಿಕೊಳ್ಳುವ-ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಇದ್ದರೆ ಅದು ಕನ್ನಡಿಗರದ್ದೇ ಸಿಂಹಪಾಲು. ಉಳಿದೆಲ್ಲ ಜನಾಂಗವನ್ನು ಪ್ರೀತಿಯಿಂದ ಆದರದಿಂದ ಕಂಡು ಇಲ್ಲಿ ಬಂದವರಿಗೆ ನೆಲೆಯನ್ನ ಕೊಟ್ಟು ಪೋಷಿಸಿ ಪಾಲಿಸಿದೆ. ಕರ್ನಾಟಕದ ಬೆಳಗಾವಿಯಿಂದ ಹಿಡಿದು ಉತ್ತರಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಮರಾಠಿಗರನ್ನ ಕಾಣಬಹುದು. ಪೋರ್ಚುಗೀಸರ ಕಾಲದಲ್ಲಿ ಮತಾಂತರಕ್ಕೆ ಒಳಗಾಗುವುದನ್ನ ತಪ್ಪಿಸಿ ಓಡಿಬಂದು ಕರ್ನಾಟಕದಲ್ಲಿ ನೆಲೆಕಂಡವರಲ್ಲಿ ಕೊಂಕಣಿಗರ ಪಾಲೂ ಇದೆ. ಕೊಂಕಣಿಗರು ಕರಾವಳಿ ಭಾಗದಲ್ಲಿ ನೆಲೆಸಿದ್ದೇ ಹೆಚ್ಚು ಹಾಗು ಕರ್ನಾಟಕ ಶ್ರೇಯೋಭಿವೃದ್ಧಿಗೆ ಕೊಂಕಣಿಗರು ದುಡಿದಿದ್ದಾರೆ. ಸ್ವಾತಂತ್ರ್ಯ ಕಾಲಘಟ್ಟದಲ್ಲಿ ಮಹಾರಾಷ್ಟ್ರದಲ್ಲಿ ಬಂದೊರಗಿದ ಬರಗಾಲದ ಹೊಡೆತಕ್ಕಿ ಸಿಕ್ಕಿ ವಲಸೆ ಬಂದ ದನಗರ ಗೌಳಿಗರಿಗೂ ಕರುನಾಡು ಸ್ವಾಗತ ಕೋರಿತ್ತು, ಇಂದು ಬೆಳಗಾವಿಯಿಂದ ಹಿಡಿದು ಉತ್ತರಕನ್ನಡ, ಧಾರವಾಡ, ಹಾವೇರಿ, ಶಿವಮೊಗ್ಗ ಹೀಗೆ ನಡೆದೇ ಸಾಗುತ್ತಾ ಕರ್ನಾಟಕದಲ್ಲಿ ತಮಗೆ ಸೂಕ್ತವೆನಿಸಿದಲ್ಲಿ ನೆಲೆಕಂಡಿದ್ದಾರೆ.

ಇವರುಗಳ ಜೊತೆಗೆ ಪೋರ್ಚುಗೀಸರ ಕ್ರೂರತೆಗೆ ಬಲಿಪಶುವಾಗುವುದನ್ನ ತಪ್ಪಿಸಿಕೊಳ್ಳಲು ಉತ್ತರಕನ್ನಡಕ್ಕೆ ವಲಸೆ ಬಂದು ಪಶ್ಚಿಮಘಟ್ಟದ ಕಾಡುಗಳಲ್ಲಿ ಮರೆಯಾಗಿ ಕಡು ಕಷ್ಟದಲ್ಲಿ ಬದುಕು ಕಟ್ಟುತ್ತಾ ಬೆಳೆಯುತ್ತಿರುವ ಒಂದು ವಿಶೇಷ ಸಮುದಾಯವಿದೆ. ಇವರ ಕುರಿತು ತಿಳಿಯುವ ಪ್ರಯತ್ನ ಈ ಲೇಖನದಲ್ಲಿ. ಸ್ವತತಂತ್ರರಾಗಬೇಕು ಎಂಬ ಹಂಬಲದೊಂದಿಗೆ ಕಾಡನ್ನ ಹೊಕ್ಕವರು, ಹೆದರೆದರಿ ಬದುಕಿದವರು, ಮೊದಲ ಬಾರಿಗೆ ಸ್ವಾತಂತ್ರ್ಯದ ಸಂತಸ ಅನುಭವಿಸಿ ಕಾಡನ್ನೇ ನೆಚ್ಚಿಕೊಂಡವರು. ಅವರೇ ಕರ್ನಾಟಕದ ಸಿದ್ಧಿಗಳು. ಮಾನವ ಕುಲವನ್ನ ಪ್ರಮುಖವಾಗಿ ಮೂರು ವಿಭಾಗಗಳನ್ನಾಗಿ ಮಾಡಿದಾಗ ಕಾಕಾಸಾಯ್ಡ, ಮಂಗೋಲಾಯ್ಡ ಮತ್ತು ನಿಗ್ರೋಯ್ಡ ಎಂಬ ಮಾನವ ಜನಾಂಗಗಳು ಸಿಗುತ್ತವೆ. ಆಫ್ರಿಕಾದಲ್ಲಿ ಉದಯಿಸಿ ನೆಲೆಕಂಡ ನಿಗ್ರೋಯ್ಡ ಜನಾಂಗಕ್ಕೆ ಸೇರಿರುವ ಸಿದ್ದಿಗಳು ಗೋವಾದಿಂದ ಕರ್ನಾಟಕದ ಪಶ್ಚಿಮ ಘಟ್ಟ ಸರಣಿಯಲ್ಲಿನ ಉತ್ತರ ಕನ್ನಡ ಜಿಲ್ಲೆಯಲ್ಲಿನ ಹಳಿಯಾಳ, ಯಲ್ಲಾಪುರ, ಅಂಕೋಲಾ, ಮುಂಡಗೋಡ ಮತ್ತು ಶಿರಸಿ ತಾಲೂಕುಗಳಲ್ಲಿ, ಬೆಳಗಾವಿ ಜಿಲ್ಲೆಯ ಖಾನಾಪುರದ ಕೆಲವು ಪ್ರದೇಶಗಳಲ್ಲಿ ಹಾಗೂ ಧಾರವಾಡದ ಕಲಘಟಗಿಗಳಲ್ಲಿ ನೆಲೆನಿಂತರು.

ಇವರ ಆಗಮನದ ಕುರಿತು ಅನೇಕ ಐತಿಹಾಸಿಕ ಹಿನ್ನೆಲೆ ಹಾಗು ಕೆಲವು ಕಾಲ್ಪನಿಕ ಕಥೆಗಳೂ ಇವೆ. ಒಂದು ಐತಿಹಾಸಿಕ ವಿಶ್ಲೇಷಣೆಯ ಪ್ರಕಾರ ಈ ಜನಾಂಗದವರನ್ನು ಪೋರ್ಚುಗೀಸರು ಭಾರತಕ್ಕೆ ಮರಗಳನ್ನ ಕಡಿಯುವುದಕ್ಕಾಗಿ ಹದಿನಾರನೇ ಶತಮಾನದಲ್ಲಿ ಗುಲಾಮರನ್ನಾಗಿ ಮಾಡಿಕೊಂಡು ಕರೆದುಕೊಂಡು ಬಂದರು ಎನ್ನಲಾಗುತ್ತದೆ. ಸಿದ್ದಿ ಜನಾಂಗದವರು ಆಫ್ರಿಕನ್ ನಿಗ್ರಾಯ್ಡ್ ಮಾನವ ಜನಾಂಗಕ್ಕೆ ಸೇರಿದ್ದು ದಷ್ಠ -ಪುಷ್ಠ ದೇಹದಾಢ್ಯರಾದ ಇವರು ಶ್ರಮದ ಕೆಲಸಗಳನ್ನು ಮಾಡುವವರು, ದೈಹಿಕವಾಗಿ ಸಮರ್ಥರು ಎಂದು ಗುರುತಿಸಿಕೊಂಡಿರುತ್ತಾರೆ, ಇದೇ ಕಾರಣಕ್ಕೆ ಪೋರ್ಚುಗೀಸರು ತಮ್ಮ ಹಡಗುಗಳ ನಿರ್ಮಾಣಕ್ಕಾಗಿ ಗೋವಾ ಮತ್ತು ಕರ್ನಾಟಕದ ಅಂಚಿನಲ್ಲಿರುವ ಕಾಡುಗಳಲ್ಲಿರುವ ಬೃಹತ್‌ ಮರಗಳನ್ನು ಕಡಿದು ಹಡಗು ಕಟ್ಟಲು ಆಫ್ರಿಕಾದಿಂದ ಮೂಲನಿವಾಸಿಗಳನ್ನು ಬಂದೂಕು ತೋರಿಸಿ ಜನಗಳನ್ನು ಎಳೆದು ತಂದು ಗೋವಾದಲ್ಲಿ ಕಾಲಿಗೆ ಬೇಡಿ ತೊಡಿಸಿ ಬಿಟ್ಟಿರುತ್ತಾರೆ. ನಂತರದ ದಿನಗಳಲ್ಲಿ ಸ್ವಾತಂತ್ರದ ಕಿಚ್ಚು ಹೆಚ್ಚಿದಂತೆ ಗೋವಾದ ಪ್ರಾಂತ್ಯದಲ್ಲಿ ಇದ್ದ ಆಫ್ರಿಕನ್ ಮೂಲ ನಿವಾಸಿಗಳಾದ ಸಿದ್ದಿ ಜನಾಂಗದವರು ತಮ್ಮಲ್ಲೇ ಒಗ್ಗಟ್ಟನ್ನು ಕಂಡುಕೊಂಡು ಭಾರತೀಯ ಸ್ವಾತಂತ್ರ ಹೋರಾಟಗಾರರೊಂದಿಗೆ ಸೇರಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತ್ಯಾಗವನ್ನೂ ಮಾಡಿ, ಪೋರ್ಚುಗೀಸರ ಮುಷ್ಟಿಯಿಂದ ತಪ್ಪಿಸಿಕೊಂಡು ಬಂದು ಕರ್ನಾಟಕದ ಸಹ್ಯಾದ್ರಿಯ ಬೆಟ್ಟಗಳಲ್ಲಿ ಬಂದು ಸೇರಿಕೊಂಡರು.

ನಂತರದ ದಿನಗಳಲ್ಲಿ ಬದುಕು ನಿರ್ವಹಿಸಲು, ಇಲ್ಲಿರುವ ಭೂ ಮಾಲೀಕರ ಭೂಮಿಗಳಲ್ಲಿ ದುಡಿಯುತ್ತಾ, ಇನ್ನು ಕೆಲವರು ತಮ್ಮದೇ ಭೂಮಿಯನ್ನ ರಚಿಸಿಕೊಂಡು ವ್ಯವಸಾಯವನ್ನು ಮಾಡುತ್ತಾ, ಮತ್ತೊಂದಿಷ್ಟು ಜನ ಕೂಲಿಯನ್ನ ಮಾಡುತ್ತಾ, ಕೆಲಸ ಮಾಡುತ್ತಿರುವುದು ಸರ್ವೇಸಾಮಾನ್ಯವಾದ ದೃಶ್ಯವಾಗಿದೆ. ಕರ್ನಾಟಕದಲ್ಲಿರುವ ಸಿದ್ದಿಗಳು ತಮ್ಮ ಮನೆ ಭಾಷೆಯನ್ನಾಗಿ ಕೊಂಕಣಿಯನ್ನು ಸ್ವೀಕರಿಸಿದ್ದಾರೆ. ಯಲ್ಲಾಪುರದಲ್ಲಿ ಕನ್ನಡವನ್ನು ಮಾತಾಡುತ್ತಾರೆ.

ಇತ್ತೀಚಿನ ಗಣತಿಯ ಪ್ರಕಾರ ಸುಮಾರು 3700 ಸಿದ್ದಿ ಕುಟುಂಬಗಳು ಮತ್ತು ಸರಿ ಸುಮಾರು 18,000 ಜನಸಂಖ್ಯೆಯನ್ನು ಕಾಣಬಹುದಾದ ಇವರ ಸಮುದಾಯದಲ್ಲಿ ತಮ್ಮ ಆಚರಣೆಯನ್ನ ಬಹಳ ನಂಬಿಕೆಯಿಂದ ನಡೆಸಿಕೊಂಡು ಬಂದವರಾಗಿದ್ದಾರೆ. ಇವರ ಒಂದು ನಂಬಿಕೆ ಎಂದರೆ ತಾವು ತಮ್ಮ ಪೂರ್ವಜರನ್ನು ನೆನೆಸಿ ಮಾಡುವ ಪೂಜೆ ಈಗಾಗಲೇ ಮರಣ ಹೊಂದಿದವರು ತಮ್ಮ ಜೊತೆಗೆ ಇದ್ದಾರೆ ಎಂದು ಭಾವಿಸಿ ಮಾಡುವ ಪೂಜೆಯಾಗಿದೆ. ಹಾಗಾಗಿ ಆ ಪೂಜೆಯ ಸಂದರ್ಭದಲ್ಲಿ ಅವರ ಆಚರಣೆ ಬಹಳ ವಿಶೇಷವಾಗಿರುತ್ತದೆ. ಈ ಸಂದರ್ಭದಲ್ಲಿನ ಇವರ ಆಚರಣೆಗಳು ಜನಪದೀಯ ಮಹತ್ವವನ್ನ ಪಡೆದುಕೊಂಡಿದೆ. ಇವರು ಜನಪದ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿ ತಮ್ಮ ಚಾಪನ್ನ ಮೂಡಿಸಿರುತ್ತಾರೆ ಇವರ ನೃತ್ಯವನ್ನು ಢಮಾಮ್ ಎಂದು ಹೆಸರಿಸುತ್ತಾರೆ. ಇದು ಗುಂಪು ನೃತ್ಯವಾಗಿದ್ದು, ಗುಮ್ಮಟೆಯನ್ನು ಭಾರಿಸುತ್ತಾ ಗುಂಪಿನಲ್ಲಿ ನೃತ್ಯವನ್ನು ಮಾಡುತ್ತಾರೆ. ಈ ನೃತ್ಯ ಈಗಾಗಲೇ ಅನೇಕರ ಕಣ್ಮನ ತಣಿಸಿದೆ. ಅನೇಕ ಕಡೆ ಪ್ರದರ್ಶನವನ್ನು ಕೂಡ ಕಂಡಿದೆ.

ಅನೇಕರು ಭಾರತೀಯ ಪರಂಪರೆಯನ್ನು ಒಪ್ಪಿಕೊಂಡಿದ್ದು ದೀಪಾವಳಿ, ನವರಾತ್ರಿ ಹೀಗೆ ಅನೇಕ ಹಬ್ಬ ಹರಿದಿನಗಳನ್ನು ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ಭಾರತೀಯ ನಿಸರ್ಗರಾಧನೆ ಮತ್ತು ಆಚರಣೆಗಳು ಆಫ್ರಿಕನ್ ಬುಡಕಟ್ಟು ಸಂಸ್ಕೃತಿ ಆಚರಣೆಗಳಿಗೆ ತೀರಾ ಹತ್ತಿರವಿರುವ ಕಾರಣ ಸಿದ್ದಿಗಳಿಗೆ ಇಂದು ಪೂರಕವಾದ ವಾತಾವರಣ ಕರ್ನಾಟಕದಲ್ಲಿ ದೊರೆಯಿತು ಎನ್ನಬಹುದು.

ಸಿದ್ದಿ ಜನಾಂಗದವರ ಆರ್ಥಿಕ ಪರಿಸ್ಥಿತಿ ತುಂಬಾ ತಳಮಟ್ಟದಲ್ಲಿದ್ದು ಅವರ ಶ್ರೇಯೋಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನ ಕರ್ನಾಟಕ ಸರಕಾರ ಹಮ್ಮಿಕೊಂಡು ಆರ್ಥಿಕ ಸ್ಥಿತಿಯನ್ನು ಹಾಗೂ ಸಾಮಾಜಿಕ ಸ್ಥಿತಿ ಉತ್ತಮೀಕರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. 1984ರಲ್ಲಿ ದಾಂಡೇಲಿಯಲ್ಲಿರುವ ಗ್ರಾಮೀಣ ಕಲ್ಯಾಣ ಸಮಿತಿಯವರು ಕರ್ನಾಟಕ ಅಭಿವೃದ್ಧಿ ಸಂಘವನ್ನ ಪ್ರಾರಂಭಿಸಿ ಈ ಮೂಲಕ ಸಿದ್ದಿ ಜನಾಂಗದವರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಉದ್ಯೋಗಾವಕಾಶವನ್ನು ನೀಡುವ ಮಹತ್ಕಾರ್ಯ ನಡೆಯುತ್ತಿದೆ. ಜನವರಿ ೮, ೨೦೦೩ರಲ್ಲಿ, ಕೇಂದ್ರ ಸರ್ಕಾರ ಸಿದ್ದಿ ಜನಾಂಗವನ್ನು ʼಶೆಡ್ಯೂಲ್ ಟ್ರೈಬ್ಸ್ʼ ಪಟ್ಟಿಯಲ್ಲಿ ಪರಿಗಣಿಸಿತು. ಇದರಿಂದಾಗಿ ಈ ಜನಾಂಗ ಇಂದು ಸಂವಿಧಾನದ ಪ್ರಕಾರ ಶಕ್ತರಾಗಿರುತ್ತಾರೆ. ನಿರಾಶ್ರಿತ ಸಿದ್ದಿಯರಿಗೆ ವಸತಿ ಯೋಜನೆ, ಉದ್ಯೋಗಾವಕಾಶ, ಶಿಕ್ಷಣ, ವಿದ್ಯುತ್‌ಶಕ್ತಿ, ಆಸ್ಪತ್ರೆಗಳು, ರಸ್ತೆಗಳು, ಮುಂತಾದ ಸೌಲಭ್ಯಗಳನ್ನು ನೀಡುವ ಕಾರ್ಯ ಸರ್ಕಾರ ಕೈಗೊಂಡಿದೆ. ಇದರ ಅಡಿ, ಪ್ರತಿಯೊಂದು ಸಿದ್ದಿ ಕುಟುಂಬಕ್ಕೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ, ಯು.ಎನ್.ಓ ಸಂಘದ ಯುನೆಸ್ಕೊ ಸಮಿತಿ ಈ ಬುಡುಕಟ್ಟಿನವರ ಪುನರ್ವಸತಿ ಕಾರ್ಯವನ್ನು ಮಾಡಲು ಮುಂದಾಗಿದೆ. ಇದಕ್ಕಾಗಿಯೇ ಹಣದ ಸಹಾಯವನ್ನೂ ಸಹ ನೀಡುತ್ತಿದೆ.

ಶೈಕ್ಷಣಿಕ ಕ್ಷೇತ್ರದಲ್ಲೂ ಕೂಡ ಅನೇಕ ವ್ಯಕ್ತಿಗಳು ಸಾಧನೆಯನ್ನು ಮಾಡಿದ್ದು ಮತ್ತು ಮಾಡುವ ಹಾದಿಯಲ್ಲಿದ್ದು ತಮ್ಮ ಸಮುದಾಯಕ್ಕೆ ಕೀರ್ತಿಯನ್ನು ತರುವ, ಸಮುದಾಯವನ್ನು ಗುರುತಿಸುವ ಕಾರ್ಯದಲ್ಲಿ ಮುನ್ನುಗ್ಗುತ್ತಿದ್ದಾರೆ. ಈಗಾಗಲೇ ರಾಜಕೀಯ, ಸಮಾಜ ಸೇವೆ, ಪೋಲೀಸ್‌ ಇಲಾಖೆ, ಶಿಕ್ಷಣ ಇಲಾಖೆ ಹೀಗೆ ಅನೇಕ ಉದ್ಯೋಗವನ್ನು ಕಂಡುಕೊಂಡಿದ್ದು ಸಾಧನೆಯ ಹಾದಿಯಲ್ಲಿದ್ದಾರೆ. ಕಲಾ ಕ್ಷೇತ್ರ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ದಾಪುಗಾಲನ್ನು ಇಡುತ್ತಿದ್ದಾರೆ.

ಶ್ರೀ ಶಾಂತಾರಾಮ ಸಿದ್ಧಿ, ಮಾನ್ಯ ವಿಧಾನ ಪರಿಷತ್‌ ಸದಸ್ಯರು, ಕರ್ನಾಟಕ

ಸಿದ್ದು ಜನಾಂಗದಲ್ಲಿ ಮೊಟ್ಟಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಶಾಂತರಾಮ್ ಸಿದ್ದಿಯವರು ಆಯ್ಕೆಗೊಂಡಿದ್ದು ಸಿದ್ದಿ ಸಮುದಾಯಕ್ಕೆ ಒಂದು ಗರಿಯೇ ಸರಿ. ಹೀಗೆ ಜನಪದ, ಸಂಗೀತ, ಸಾಹಿತ್ಯ, ನಾಟಕ, ಕೃಷಿ, ಸಾಮಾಜಿಕವಾಗಿ, ರಾಜಕೀಯವಾಗಿ ಏಳ್ಗೆಯನ್ನ ಕಾಣುತ್ತಿದ್ದು, ದೇಶಕ್ಕೆ ಕೊಡುಗೆಯನ್ನ ನೀಡುವುದರಲ್ಲಿ ಎರಡು ಮಾತಿಲ್ಲ. ‌

ಲೇಖನದ ಕುರಿತು, ಹಾಗು ಇರತ ಮಾಹಿತಿಗಾಗಿ ದಯಮಾಡಿ ಕಮೆಂಟ್‌ ಬಾಕ್ಸನಲ್ಲಿ ಬರೆಯಿರಿ

- Halli News

Video Curtsy: YouTube channel owners 

ಡಮಾಮಿ ನೃತ್ಯ ಗುಳ್ಳಾಪುರ

ಜಿಲ್ಲಾ ಪಂಚಾಯತ ಇದರ ಕಾರ್ಯಯೋಜನೆ ಡಾಕ್ಯುಮೆಂಟ್
 



Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive