
ಶಿರಸಿ: ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಶಿರಸಿ ಹಾಗೂ ಮುಂಡುಗೋಡ ಭಾಗದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯು ಸುರಿದಿದ್ದು, ಜನರಲ್ಲಿ ಭಯವನ್ನುಂಟುಮಾಡಿದೆ. ಗಾಳಿ ಹಾಗೂ ಮಿಂಚಿನ ಆರ್ಭಟವು ಕೂಡ ಗಂಭೀರವಾಗಿದ್ದು, ಕೆಲವೊಂದು ಕಡೆ ಮರಗಳು ಉರುಳಿದ ಘಟನೆಗಳೂ ವರದಿಯಾಗಿವೆ.
ಮುಂಡುಗೋಡ ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಮೂರು ಗಂಟೆ ಸುಮಾರಿಗೆ ವಿದ್ಯಾರ್ಥಿಗಳನ್ನು ಮನೆಗೆ ಕಳಿಸುವ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡರು. ಅಲ್ಲದೆ, ಕೆಲವು ಶಾಲೆಗಳ ಅಂಗಳಗಳಲ್ಲಿ ನೀರು ನಿಂತಿದ್ದು ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಸುರಕ್ಷೆ ವಿಚಾರವಾಗಿ ಹೆದರಿದರು ಹಾಗು ಮಕ್ಕಳ ಓಡಾಟಕ್ಕೂ ತೊಂದರೆಯಾಯಿತು.
ಶಿರಸಿ ತಾಲೂಕಿನ ಬಿಸಲಕೊಪ್ಪದಲ್ಲಿ ಹೈಸ್ಕೂಲ್ ಹತ್ತಿರವಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಅದಕ್ಕೆ ಬೆಂಕಿ ಹೊತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತು. ಅಲ್ಲೇ ನೆರೆದಿದ್ದ ಜನರೆಲ್ಲರೂ ಪ್ರಕೃತಿಯ ವಿಸ್ಮಯಕ್ಕೆ ಬೆರಗಾದರು. ತಮ್ಮ ಮೊಬೈಲ್‌ಗಳಲ್ಲಿ ದೃಶ್ಯವನ್ನ ಸೆರೆಹಿಡಿಯತೊಡಗಿದರು.
ಘಟ್ಟದ ಮೇಲೆ ಹಾಗೂ ಕೆಳ ಭಾಗಗಳಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ರಾತ್ರಿ ವೇಳೆಗೆ ಭಾರೀ ಮಳೆಯು ಸುರಿಯುತ್ತಿದ್ದು, ರೈತರ ಭತ್ತ, ಗೇರು, ಶೇಂಗಾ ಮೊದಲಾದ ಬೆಳೆಗಳಿಗೆ ಸಾಕಷ್ಟು ಹಾನಿಯುಂಟಾಗಿದೆ. ನದಿ, ಹಳ್ಳಕರೆಗಳು ತುಂಬಿ ಹರಿಯುವ ಸ್ಥಿತಿಯಲ್ಲಿದ್ದು, ಕೆಲವು ಗ್ರಾಮೀಣ ರಸ್ತೆಗಳು ಕಿತ್ತುಹೋಗಿದ್ದು ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಇಂದಿನ ಮಳೆ ಹಳಿಯಾಳ, ಯಲ್ಲಾಪುರ, ಶಿರಸಿ, ಸಿದ್ದಾಪುರದಲ್ಲಿ ಬಿದ್ದ ವರದಿಯಾಗಿದೆ. ಅನೇಕ ಕಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕೆಲವರು ಆಲಿಕಲ್ಲು ಆಯುವ ಪ್ರಯತ್ನದಲ್ಲಿದ್ದುದು ಕಂಡುಬಂತು. ಯಲ್ಲಾಪುರದಲ್ಲಿ ಅನೇಕ ಕಡೆ ದೊಡ್ಡ ಗಾತ್ರದ ಮರಗಳು ಉರುಳಿ ಬಿದ್ದಿದ್ದು ವಾಹನ ಸಾಗಾಟಕ್ಕೆ ತೊಂದರೆಯಾಗಿದ್ದು ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಕೂಡಾ ಆಗಿರುತ್ತದೆ. ಆದರೆ ಕೆ.ಪಿ.ಟಿ.ಸಿ.ಎಲ್. ನೌಕರರು ಆಹೋರಾತ್ರಿ ಸರಿಪಡಿಸಿ ವಿದ್ಯುತ್ ಪೂರೈಕೆ ಸರಿಪಡಿಸಲು ಪ್ರಯತ್ನಿಸುತ್ತಿದ್ದರು. ʼಅಂತೂ ನಿನ್ನೆಯ ಮಳೆ ಜನರಲ್ಲಿ ಭಯ ಆಶ್ಚರ್ಯ ಹುಟ್ಟಿಸಿ ಮಳೆಗಾಲಕ್ಕೆ ಸಿದ್ಧತೆ ಎಂಬಂತೆ ಕಂಡಿತು"- ಎಂದು ಯಲ್ಲಾಪುರದ ಈಶ್ವರ ಗೌಡ ಅಭಿಪ್ರಾಯಪಟ್ಟರು. "ಬಿರುಬಿಸಿಲಿನಿಂದ ಬಳಲಿದ್ದ ಜನತೆ ರಾತ್ರಿ ಚಾದಾರ ಹೊದ್ದು ಮಲಗುವಷ್ಟು ತಂಪನ್ನ ತಂದಿದೆ"- ಎಂದು ಶಿರಸಿಯ ಕೆಲವರಂದರು
ಅಧಿಕಾರಿಗಳ ಎಚ್ಚರಿಕೆ: ಹವಾಮಾನ ಇಲಾಖೆ ಮುಂದಿನ ಎರಡು ದಿನಗಳಿಗೂ ತೀವ್ರ ಮಳೆಯ ಮುನ್ಸೂಚನೆ ನೀಡಿರುವುದರಿಂದ ನಾಗರಿಕರಿಗೆ ಅಗತ್ಯವಿಲ್ಲದೆ ಹೊರಬರದಂತೆ ಸಲಹೆ ನೀಡಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಸಹಾಯಕ್ಕಾಗಿ ಸ್ಥಳೀಯ ಆಡಳಿತ ಹಾಗೂ ಸಹಾಯವಾಣಿ ಸಂಖ್ಯೆಗಳ ಸಹಾಯವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ.
0 Comments:
ಕಾಮೆಂಟ್ ಪೋಸ್ಟ್ ಮಾಡಿ