ರಾಷ್ಟ್ರೀಯ ಯುವ ದಿನಾಚರಣೆಯ ಭಾಷಣ

"ನಿಮ್ಮ ಬದುಕಿನ ನಿಜವಾದ ಹೀರೋ ನೀವೇ ಆಗಿರಿ"

ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ ಇಡೀ ದೇಶದಾದ್ಯಂತ ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಹೌದು ವಿವೇಕಾನಂದರೆಂದರೆ ಯುವಕರಿಗೆ ಸ್ಪೂರ್ತಿ, ಯುವಕರ ಆದರ್ಶ. ಅವರ ಸಂದೇಶಗಳು ಯುವ ಜನತೆಯಲ್ಲಿ ಇನ್ನಲ್ಲದ ಉತ್ಸಾಹ ಮತ್ತು ಶಕ್ತಿಯನ್ನು ತುಂಬುತ್ತದೆ. ಅವರ ಮಾತಷ್ಟೇ ಅಲ್ಲ ಇಡೀ ಜೀವನ, ಅವರ ವ್ಯಕ್ತಿತ್ವ ಯುವಕರಿಗೆ ಆದರ್ಶಪ್ರಾಯವಾದದ್ದು.

"ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ, ವಿದ್ಯುತ್ತಿನ ಇಚ್ಚಾಶಕ್ತಿ ಇರುವ ನೂರು ಜನ ಯುವಕರು ನನಗೆ ಬೇಕು, ಅವರಿಂದ ನಾನು ಈ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ" ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಹೀಗೆ ಹೇಳುವುದರ ಮೂಲಕ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಶಕ್ತಿಯ ಪಾತ್ರ ಎಷ್ಟು ಮುಖ್ಯವಾದದ್ದು ಎನ್ನುವುದನ್ನು ಒತ್ತಿ ಹೇಳಿದ್ದಾರೆ. ಜೊತೆಗೆ ದೇಶದ ಮುಂದಿನ ಸಂಪತ್ತಾಗಿರುವ ಯುವಕರು ಯಾವ ರೀತಿ ಇರಬೇಕು ಎಂಬ ನಿದರ್ಶನವನ್ನು ನೀಡಿದ್ದಾರೆ. ದೈಹಿಕವಾಗಿ ಮಾನಸಿಕವಾಗಿ ಸದೃಢವಾದ ಯುವ ಸಮೂಹದಿಂದ ದೇಶದ ಭವಿಷ್ಯವನ್ನು ರೂಪಿಸಬಹುದು ಎಂದು ಹೇಳಿದ್ದಾರೆ.

Watch This video 

ವಿವೇಕಾನಂದರ ದೊಡ್ಡ ಕನಸೆಂದರೆ ಅದು ‘ಸಶಕ್ತ ಭಾರತ‘ದ ನಿರ್ಮಾಣ. ಸಶಕ್ತತೆ ಎಲ್ಲ ಆಯಾಮಗಳಲ್ಲಿಯೂ ಇರಬೇಕೆಂಬುದು ಅವರ ಆಶಯವಾಗಿತ್ತು. ಇದೇ ಆಶಯದಿಂದಲೇ ಅವರು ಹೇಳಿದ ಒಂದು ಮಾತು ಕೆಲವರ ಕೆಂಗಣ್ಣಿಗೂ ಗುರಿಯಾಗಿತ್ತು. ಅದ್ಯಾವುದೆಂದರೆ ‘ಮನೆಯಲ್ಲಿ ಕೂತು ಗೀತೆ ಓದುವುದಕ್ಕಿಂತ, ಮೈದಾನದಲ್ಲಿ ಫುಟ್ಬಾಲ್ ಆಡುವುದು ಹೆಚ್ಚು ಅಗತ್ಯ’ ಎಂಬ ಸಂದೇಶ. ಈ ಮಾತು ಮೇಲ್ನೋಟಕ್ಕೆ ಕಟುವಾಗಿ ಎನಿಸಿದರೂ ಇದು ಸತ್ಯಕ್ಕೆ ಹತ್ತಿರವಾದ ಮಾತಾಗಿದೆ. ಸಾಧನೆಗೆ ಬೇಕಾದ ದೃಢವಾದ ಶರೀರವೇ ಇಲ್ಲದ ಮತ್ತು ಪ್ರಭಲವಾದ ಇಚ್ಛಾಶಕ್ತಿ ಇಲ್ಲದೇ ಕ್ಷಣ ಕ್ಷಣಕ್ಕೂ ಗುರಿಯಿಂದ ವಿಮುಖರಾಗುವ ವ್ಯಕ್ತಿಗಳಿಂದ ಯಾವ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ.

ಯುವ ಜನತೆಯಲ್ಲಿರುವ ಅಪಾರ ಶಕ್ತಿಯನ್ನು ಸಮಾಜ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬಳಸುವುದು ಅತ್ಯಗತ್ಯ. ಇತಿಹಾಸವನ್ನು ಗಮನಿಸಿದಾಗ ದೇಶದ ಮೇಲೆ ಯಾವಾಗ ಬಿಕ್ಕಟ್ಟಿನ ಮೋಡಗಳು ಆವರಿಸಿಕೊಂಡಿದ್ದವೋ ಆ ಸಮಯದಲ್ಲಿ ಅದನ್ನು ಹೋಗಲಾಡಿಸಲು ಯುವಶಕ್ತಿ ವಹಿಸಿದ ಪಾತ್ರ ಬಹುಮುಖ್ಯವಾದದ್ದು. ದೇಶದ ಸ್ವಾತಂತ್ರ್ಯ ಸಂಗ್ರಾಮವೇ ಅದಕ್ಕೆ ಸಾಕ್ಷಿ. ಯುವಕರೇ ದೇಶದ ಭವಿಷ್ಯ, ಯುವಕರೇ ದೇಶದ ಸಂಪತ್ತು. ಆದರೆ ಇಂದಿನ ಬಹುಪಾಲು ಯುವ ಜನತೆ ಬರೀ ಕನಸುಗಳ ಲೋಕದಲ್ಲಿ ಮುಳುಗಿದೆ. ಅವರಲ್ಲಿ ಎಂತಹ ಕನಸುಗಳನ್ನು ಕಟ್ಟಿಕೊಳ್ಳಬೇಕು ಎಂಬ ಪರಿವೆ ಸಹ ಇಲ್ಲದಾಗಿದೆ. ಯಾರ್ಯಾರನ್ನೋ ತಮ್ಮ ಹೀರೋ ಎಂದುಕೊಂಡು ಒಡಾಡುತ್ತಿರುತ್ತಾರೆ. ತಮ್ಮ ಹಾಗೂ ನಾಡಿನ ಏಳ್ಗೆಗಾಗಿ ಸಮಯವನ್ನು ಬಳಸದೇ ಯುವ ಶಕ್ತಿ ವ್ಯಯವಾಗುತ್ತಿದೆ.

ಸ್ವಾಮಿ ವಿವೇಕಾನಂದರು "ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ" ಎಂಬ ಸಂದೇಶ ಬಹಳ ಪ್ರಖ್ಯಾತಿ ಪಡೆದಿದೆ. ಇಲ್ಲಿ ಅವರು ನಿದ್ರೆಯಲ್ಲಿ ಮಲಗಿದವರನ್ನು ಏಳಿ ಎಂದು ಹೇಳುತ್ತಿಲ್ಲ. ಹಾಗೆ ಸುಮ್ಮನೆ ಕುಳಿತವರನ್ನು ಏಳಿ ಎಂದು ಹೇಳಿಲ್ಲ. ನಿದ್ರೆಯಿಂದ ಎದ್ದು ಓಡಾಡುತ್ತಿರುವವರಿಗೆ ಹೇಳಿದ ಮಾತಿದು. ಯಾವುದೋ ಭ್ರಮೆಯ ಲೋಕದಲ್ಲಿ ಇರುವುದನ್ನು ಬಿಟ್ಟು, ನಿಮ್ಮ ಉದ್ದಾರಕ್ಕಾಗಿ ನೀವೇ ಕಂಕಣ ಬದ್ಧರಾಗಿರಿ. ಮುಂದೆ ಗುರಿಯನ್ನು ಇಟ್ಟುಕೊಳ್ಳಿ ಮತ್ತು ಆ ಗುರಿಯನ್ನು ಸಾಧಿಸಲು ಸತತ ಪ್ರಯತ್ನವನ್ನು ಮಾಡಿ. ಆ ಗುರಿಯನ್ನು ಮುಟ್ಟುವವರೆಗೆ ವಿರಮಿಸದಿರಿ, ನಿಲ್ಲದಿರಿ ಎಂಬುದಾಗಿ ಹೇಳಿದ್ದಾರೆ. ಯಾವುದೇ ಸ್ಪಷ್ಟ ಗುರಿಯನ್ನು ಹೊಂದದೆ ಯಾವುದೇ ಕಠಿಣ ಪರಿಶ್ರಮವನ್ನು ಪಡೆದೇ ಯಾವುದೋ ಒಂದು ಕಾಲ ಬರುತ್ತದೆ, ಯಾರೋ ನಮ್ಮನ್ನು ಉದ್ಧಾರ ಮಾಡುತ್ತಾರೆ ಎಂದು ಜೀವನವನ್ನು ದೂಡುತ್ತಿದ್ದವರಿಗೆ ಎಚ್ಚರವಾಗಿರಿ, ಏಳಿ, ಏದ್ದೇಳಿ ಎಂಬ ಸಂದೇಶವನ್ನು ನೀಡಿದ್ದಾರೆ. ಇಂದಿನ ಯುವ ಜನಾಂಗ ಈ ಸಂದೇಶವನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕು.

ಯುವಜನರಿಗೆ ವಿವೇಕಾನಂದರು ಆದರ್ಶಪ್ರಾಯರಷ್ಟೇ ಅಲ್ಲ, ಅವರ ವ್ಯಕ್ತಿತ್ವ ಎಲ್ಲ ಯುವಕ–ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ಅವರು ಸಾರಿದ್ದು ಶಕ್ತಿಯ ಸಂದೇಶವನ್ನು. ಅವರ ಬೋಧನೆಗಳಲ್ಲಿ ನಾವು ಮತ್ತೆ ಮತ್ತೆ ಕಾಣುವ ಸಂದೇಶ: 'ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ'. ನನ್ನಿಂದ ಇದು ಸಾಧ್ಯ we can ಎನ್ನುವ ಮನೋಭಾವ ಯುವಕರಲ್ಲಿ ಬರಬೇಕು.

ಸ್ವಾಮಿ ವಿವೇಕಾನಂದರ ಮಾತಷ್ಟೇ ಅಲ್ಲ ಅವರ ಜೀವನವೂ ಯುವಕರಿಗೆ ಆದರ್ಶಪ್ರಾಯವಾದದ್ದು. ಅವರು ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ದೇವರ ಬಗ್ಗೆಯೂ ಹಾಗೆಯೇ "ದೇವರು ಇದ್ದಾನೆಯೇ?"  ಎಂದು ಅವರು ಮೊದಲು ಎಲ್ಲ ವಿದ್ವಾಂಸರ ಬಳಿ ಚರ್ಚಿಸಿದ್ದಾರೆ. ಸರಿಯಾದ ಉತ್ತರ ಸಿಗದಿದ್ದಾಗ ನಂತರ ತಮಗೆ ಪಾಠ ಮಾಡುತ್ತಿದ್ದ ಕಾಲೇಜಿನ  ಉಪನ್ಯಾಸಕರ ಬಳಿಯೂ ಕೇಳುತ್ತಾರೆ  ಆಗ ಅವರು ದಕ್ಷಿಣೇಶ್ವರದ  ಸಂತ ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಕೇಳು ಎಂದು ಸೂಚಿಸುತ್ತಾರೆ.  ಅವರು ತಮ್ಮ ಗುರುಗಳಾದ ಶ್ರೀರಾಮಕೃಷ್ಣ ಪರಮಹಂಸರ ಬಳಿ ಹಲವಾರು ಬಾರಿ ಪ್ರಶ್ನಿಸಿ ಉತ್ತರ ಕಂಡುಕೊಳ್ಳುತ್ತಾರೆ. ಮತ್ತು ಅವರನ್ನು ಕೂಡ ತಮ್ಮ ಗುರುಗಳು ಎಂದು ಒಮ್ಮೆಲೇ ಒಪ್ಪಿಕೊಳ್ಳುವುದಿಲ್ಲ ಅವರನ್ನು ಕೂಡ ಹಲವಾರು ಬಾರಿ ಪರೀಕ್ಷಿಸಿ, ನಂತರ ಗುರುಗಳೆಂದು ಸ್ವೀಕರಿಸುತ್ತಾರೆ. ಹೀಗೆ ಎಲ್ಲವನ್ನೂ ತಾರ್ಕಿಕವಾಗಿ ನೋಡುವುದು ಅವರ ಗುಣ. ಇಲ್ಲಿ ಅವರು ತಮಗೆ ಬೇಕಾದುದರ ಕುರಿತು ನಿರಂತರವಾದ ಅನ್ವೇಷಣೆಯನ್ನು ನಡೆಸಿದರ ರೀತಿ ಹಾಗೂ ಯಾರೋ ಹೇಳಿದರು ಎಂಬ ಮಾತ್ರಕ್ಕೆ ಒಪ್ಪಿಕೊಳ್ಳದೆ ತಮಗೆ ಸರಿ ಅನ್ನಿಸುವವರಿಗೆ ಪ್ರಶ್ನೆಯನ್ನು ಮಾಡುತ್ತಾ ಉತ್ತರವನ್ನು ಕಂಡುಕೊಳ್ಳುವ ಬಗೆಯನ್ನು ಇಂದಿನ ಯುವಕರು ರೂಢಿಸಿಕೊಳ್ಳಬೇಕು. ಜಾತಿ, ಧರ್ಮ, ನಂಬಿಕೆ, ಆಚರಣೆಯ ವಿಚಾರದಲ್ಲಿಯೂ ಕೂಡ ಇದೇ ರೀತಿ ತಾರ್ಕಿಕವಾಗಿ ನೋಡುವ ಗುಣ ನಮ್ಮ ಯುವಜನತೆಯಲ್ಲಿ ಬೆಳೆಯಬೇಕು. ಧರ್ಮದ ನಿಜವಾದ ಸಾರವು ಸಾಮಾನ್ಯರಿಗೆ ಒಳಿತುಮಾಡುವುದು ಮತ್ತು ಸಹಿಷ್ಣುತೆ ಎಂದು ಅವರು ದೃಢವಾಗಿ ನಂಬಿದ್ದರು. ಧರ್ಮವು ಮೂಢನಂಬಿಕೆಗಳು ಮತ್ತು ಕಠೋರತೆಗಳಿಗಿಂತ ಮೇಲಿರಬೇಕು ಎಂದು ವಿವೇಕಾನಂದರು ಹೇಳುತ್ತಿದ್ದರು. ಇಂದಿನ ಯುವಜನತೆ ಈ ಧರ್ಮ ಮತ್ತು ಕೋಮುಗಳ ನಡುವಿನ ದ್ವೇಷದ ಅಮಲನ್ನು ಏರಿಸಿಕೊಳ್ಳಬಾರದು. ಸ್ವಾಮಿ ವಿವೇಕಾನಂದರು ಎಲ್ಲರೂ ಒಂದೇ, ಎಲ್ಲ ಧರ್ಮಗಳ ಸಾರವು ಒಂದೇ. ನದಿಗಳು ಹರಿಯುವ ದಾರಿ ಬೇರೆ ಬೇರೆಯಾದರೂ ಅದು ಕೊನೆಗೆ ಸೇರುವುದು ಸಮುದ್ರವನ್ನೇ ಹಾಗೆ ಧರ್ಮಗಳ ಆಚರಣೆಗಳು ಬೇರೆ ಬೇರೆಯಾದರೂ ಅದರ ಉದ್ದೇಶ ಒಂದೇ ಎಂದು ಅಮೆರಿಕಾದ ಸರ್ವಧರ್ಮ ಸಮ್ಮೇಳನದಲ್ಲಿ ನಡೆದ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ. ಇಂತಹ ತತ್ವಗಳ ಆಧಾರದ ಮೇಲೆ ನಾವು ದೇಶವನ್ನು ಕಟ್ಟಬೇಕಾಗಿದೆ. ಯುವ ಜನತೆ ಇಂತಹ ಆದರ್ಶಗಳನ್ನು ರೂಢಿಸಿಕೊಳ್ಳಬೇಕಾಗಿದೆ.

ಯೌವ್ವನ ಅಥವಾ ಸಾಮರ್ಥ್ಯ ಎಂಬುದು ಕೇವಲ ವಯಸ್ಸಿನಿಂದ ನಿರ್ಧಾರವಾಗುವುದಿಲ್ಲ. ಪ್ರಭಲವಾದ ಇಚ್ಛಾಶಕ್ತಿ, ಆತ್ಮಸ್ಥೈರ್ಯ, ಆತ್ಮ ವಿಶ್ವಾಸ ಹೊಂದಿದವರೆಲ್ಲರೂ ಯುವ ಮನಸ್ಸುಗಳೇ ಆಗಿರುತ್ತಾರೆ. ಆದ್ದರಿಂದ ಮೊದಲು ನಮಗೆ ನಮ್ಮ ಮೇಲೆ ನಂಬಿಕೆ ಇರಬೇಕು. ಜಗತ್ತಿನ ಇತಿಹಾಸ ನಿರ್ಮಾಣವಾಗಿರುವುದು ಜಗತ್ತಿನಲ್ಲಿರುವ ಒಟ್ಟೂ ಜನಸಂಖ್ಯೆಯಿಂದಲ್ಲ ಬದಲಾಗಿ ತನ್ನ ಮೇಲೆ ತಾನು ನಂಬಿಕೆ ಇಟ್ಟಿರುವ ಕೆಲವೇ ಕೆಲವು ವ್ಯಕ್ತಿಗಳಿಂದ.
 ನಾವೆಲ್ಲರೂ ವಿವೇಕಾನಂದರ ಆದರ್ಶಗಳನ್ನು ಪಾಲಿಸುವುದರ ಮೂಲಕ  ಆತ್ಮಸ್ಥೈರ್ಯವನ್ನು ಹೊಂದೋಣ. ಅದಕ್ಕಾಗಿ ಕಠಿಣ ಪರಿಶ್ರಮವನ್ನು ಪಡೋಣ. ನಾಡು ಮತ್ತು ರಾಷ್ಟ್ರಕ್ಕೆ ನಮ್ಮದೇ ಆದ ಕೊಡುಗೆಯನ್ನು ನೀಡೋಣ. ನಮಗೆ ನಾವೇ ಹೀರೋಗಳಾಗೋಣ.

 National youth Day| Swami Vivekananda jayanti | Speech  in Kannada


Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels