Sambhal Temple: 46 ವರ್ಷಗಳ ನಂತರ ಪತ್ತೆಯಾದ ದೇವಸ್ಥಾನ! 1978ರಲ್ಲಿ ನಡೆದ ಗಲಭೆ ಎಂಥದ್ದು? ದೇಗುಲಕ್ಕೆ ಬೆಂಕಿ ಬಿದ್ದಿದ್ದು ಹೇಗೆ?
ಈ ದೇವಾಲಯದಲ್ಲಿ ಶಿವಲಿಂಗ, ಹನುಮಾನ್ ಮತ್ತು ನಂದಿ ವಿಗ್ರಹಗಳು ಕಂಡುಬಂದಿವೆ. ಇಷ್ಟು ದಿನ ಈ ದೇವಸ್ಥಾನ ಯಾಕೆ ಕಾಣೆಯಾಗಿತ್ತು ಎಂಬ ಪ್ರಶ್ನೆ ಈಗ ಉದ್ಭವವಾಗಿದ್ದು.ಅದನ್ನು ಸ್ವಾಧೀನಕ್ಕೆ ತೆಗೆದುಕೊಂಡವರು ಯಾರು? 46 ವರ್ಷಗಳ ಹಿಂದೆ ಏನಾಗಿತ್ತು, ಇನ್ನಿತರ ನೂರಾರು ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಈ ವಿಡಿಯೋ ನೋಡಿ, ಇದಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯಿಸಿ
ಉತ್ತರಪ್ರದೇಶದ ಸಂಭಾಲ್‌ನಲ್ಲಿ (Sambhal Temple) 400 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವು ನಿನ್ನೆ ಪತ್ತೆಯಾಗಿತ್ತು. ಸ್ಥಳೀಯ ವಿದ್ಯುತ್ ಇಲಾಖೆ ಅಧಿಕಾರಿಗಳು ವಿದ್ಯುತ್ ಕಳ್ಳತನದ ಬಗ್ಗೆ ಪರಿಶೀಲನೆ ನಡೆಸಲು ಬಂದಾಗ ಇಲ್ಲಿ ದೇವಾಲಯ ಇರೋದು (Uttar Pradesh) ಬಹಿರಂಗಗೊಂಡಿತ್ತು.
ಈ ದೇಗುಲದ ಸಮೀಪದಲ್ಲಿ ಒಂದು ಬಾವಿಯೂ ಪತ್ತೆಯಾಗಿದೆ. ಈ ಬಾವಿ ಕೂಡ ದೇಗುಲಕ್ಕೆ ಸಂಬಂಧಿಸಿದ್ದಾಗಿದ್ದು, ದೇಗುಲದ ಒಳಗೆ ಶಿವಲಿಂಗ ಮತ್ತು ಹನುಮಾನ್ ವಿಗ್ರಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ದೇವಸ್ಥಾನ ಪತ್ತೆಯಾದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ನಂತರ ಪೊಲೀಸರು ಬುಲ್ಡೋಜರ್ ಮೂಲಕ ದೇವಸ್ಥಾನವನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಿದರು. ಇಂದು ಭಾನುವಾರ ಬೆಳಗ್ಗೆ ದೇವಸ್ಥಾನ ತೆರೆಯಲಾಗಿದ್ದು, ಪೂಜೆ ಹಾಗೂ ಆರತಿ ನೆರವೇರಿಸಲಾಯಿತು.
ಮಾಹಿತಿ ಪ್ರಕಾರ, ಈ ದೇವಾಲಯದಲ್ಲಿ ಶಿವಲಿಂಗ, ಹನುಮಾನ್ ಮತ್ತು ನಂದಿ ವಿಗ್ರಹಗಳು ಕಂಡುಬಂದಿವೆ. ಇಷ್ಟು ದಿನ ಈ ದೇವಸ್ಥಾನ ಯಾಕೆ ಕಾಣೆಯಾಗಿತ್ತು ಎಂಬ ಪ್ರಶ್ನೆ ಈಗ ಉದ್ಭವವಾಗಿದ್ದು, ಅದನ್ನು ಸ್ವಾಧೀನಕ್ಕೆ ತೆಗೆದುಕೊಂಡವರು ಯಾರು? 46 ವರ್ಷಗಳ ಹಿಂದೆ ಏನಾಗಿತ್ತು, ನಂತರ ಈ ದೇವಾಲಯವನ್ನು ತೆರೆಯದೇ ಇದ್ದಿದ್ದು ಯಾಕೆ ಇನ್ನಿತರ ನೂರಾರು ಪ್ರಶ್ನೆ ಮುನ್ನೆಲೆಗೆ ಬಂದಿದೆ.
46 ವರ್ಷಗಳ ಹಿಂದೆ ಅಂದರೆ 1978ರಲ್ಲಿ ಏನಾಗಿತ್ತು?
46 ವರ್ಷಗಳ ಹಿಂದೆ 1978ರಲ್ಲಿ ಒಂದು ಘಟನೆ ನಡೆದಿತ್ತು. ಆ ಘಟನೆಯ ನಂತರ ಈ ದೇವಸ್ಥಾನದ ಬಾಗಿಲು ತೆರೆಯಲೇ ಇಲ್ಲ. ಆ ಸಮಯದಲ್ಲಿ ಸಂಭಾಲ್‌ನಲ್ಲಿ ಏನಾಗಿತ್ತು ಅನ್ನೋದನ್ನು ಹುಡುಕುತ್ತಾ ಹೋದಾಗ ಸಿಗುತ್ತೆ ಒಂದು ರೋಚಕೆ ಕಥೆ. ಆ ಘಟನೆ ನಡೆದ ಸಮಯದಲ್ಲಿ ಅಲ್ಲಿಂದ ದೇಗುಲದ ಅರ್ಚಕರು ಸಹಿತ ಎಲ್ಲಾ ಹಿಂದೂಗಳು ಓಡಿಹೋಗಿದ್ದರಂತೆ.
ಈ ದೇವಾಲಯವು 400 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ ಎಂದು ಸಂಭಾಲ್ ಡಿಎಂ ನಿನ್ನೆ ಹೇಳಿದ್ದರು. ದೇವಾಲಯವನ್ನು ವಶಪಡಿಸಿಕೊಳ್ಳಲು ಸಿದ್ಧತೆಗಳು ನಡೆದಿದ್ದು, ಇಲ್ಲಿ ವಿದ್ಯುತ್ ಕಳ್ಳತನ ತಡೆಯದೇ ಇದ್ದಿದ್ದರೆ ದೇವಸ್ಥಾನ ಪತ್ತೆಯಾಗದೇ ಸಂಪೂರ್ಣ ಅತಿಕ್ರಮಣಕ್ಕೆ ಒಳಗಾಗುತ್ತಿತ್ತು. ದೇವಸ್ಥಾನವನ್ನು ಸ್ವಾಧೀನ ಮಾಡಲು ಸಿದ್ಧತೆ ನಡೆದಿದೆ. ಭಾರೀ ಪೊಲೀಸ್ ಬಂದೋಬಸ್ತ್‌ನಲ್ಲಿ ದೇವಾಲಯವನ್ನು ತೆರೆಯಲಾಗಿದ್ದು, ಒತ್ತುವರಿ ತೆರವಿಗೆ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗಿದೆ.
1976 ಮತ್ತು 1978 ರಲ್ಲಿ ಸಂಭಾಲ್‌ನಲ್ಲಿ ಗಲಭೆ!
ಸದ್ಯ ಸಂಭಾಲ್‌ನ ಜನಸಂಖ್ಯೆಯಲ್ಲಿ ಸುಮಾರು 77% ಮುಸ್ಲಿಮರು. ಸಂಭಾಲ್‌ನ ಖಗ್ಗುಸರೈ ಪ್ರದೇಶದಲ್ಲಿ ಈ ಶಂಕರನ ದೇವಾಲಯ ಕಂಡುಬಂದಿದ್ದು, ಅಲ್ಲಿ ಈ ಹಿಂದೆ ಹೆಚ್ಚಿನ ಸಂಖ್ಯೆಯ ಹಿಂದೂ ಕುಟುಂಬಗಳು ಇದ್ದವು ಎಂದು ಹೇಳಲಾಗುತ್ತದೆ. 1976 ಮತ್ತು 1978 ರಲ್ಲಿ ಇಲ್ಲಿ ಎರಡು ಪ್ರಮುಖ ಗಲಭೆಗಳು ನಡೆದವು, ಆ ಗಲಭೆಯ ನಂತರ ಹಿಂದೂಗಳು ಅಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಲು ಪ್ರಾರಂಭಿಸಿದರು. ನಂತರ ಅಲ್ಲಿ ಹಿಂದೂಗಳೇ ಇಲ್ಲ ಎನ್ನುವಷ್ಟು ಇತರ ಸಮುದಾಯದ ಜನರು ನೆಲೆಸಿದ್ದಾರೆ.
ದೈನಿಕ್ ಜಾಗರಣ್ ಅವರ ವರದಿಯ ಪ್ರಕಾರ 1976 ರಲ್ಲಿ ಸಂಭಾಲ್ ಜಮಾ ಮಸೀದಿಯ ಇಮಾಮ್ ಮುಹಮ್ಮದ್ ಹುಸೇನ್ ಅವರನ್ನು ಹತ್ಯೆ ಮಾಡಲಾಗಿತ್ತು. ದಿ ಪ್ರಿಂಟ್ ವೆಬ್‌ಸೈಟ್‌ನ ವರದಿಯು 55 ವರ್ಷದ ಹಿಂದೂ ನಿವಾಸಿ ಸುಶೀಲ್ ಗುಪ್ತಾ ಅವರೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿದ್ದು, ಅವರು ಮಸೀದಿಯ ಮುಂಭಾಗದ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಸಂಭಾಲ್ ಜಾಮಾ ಮಸೀದಿಯ ಮೌಲಾನಾ ಅವರನ್ನು 1976 ರಲ್ಲಿ ಹತ್ಯೆ ಮಾಡಲಾಯಿತು ಎಂದು ಅವರು ಕೂಡ ಹೇಳಿದ್ದಾರೆ.
ಸಂಸತ್ತಿನ ದಾಖಲೆಗಳು ಮತ್ತು 1979 ರಲ್ಲಿ ಪ್ರಕಟವಾದ ಎಸ್‌ಎಲ್‌ಎಂ ಪ್ರೇಮ್‌ಚಂದ್ ಅವರ ಪುಸ್ತಕ ‘ಮಾಬ್ ವಯಲೆನ್ಸ್ ಇನ್ ಇಂಡಿಯಾ’ ಮೌಲಾನಾರನ್ನು ಹಿಂದೂ ಉದ್ರಿಕ್ತ ಗುಂಪು ಹತ್ಯೆ ಮಾಡಿದೆ ಎಂದು ಹೇಳುತ್ತದೆ. ಘಟನೆ ನಡೆದು ಸ್ವಲ್ಪ ಸಮಯದ ನಂತರ, ಮೌಲಾನಾ ಅವರ ಕುಟುಂಬವು ಯುಪಿಯ ಅಜಂಗಢ್‌ನಲ್ಲಿರುವ ಅಹಿರುಲಾಗೆ ಸ್ಥಳಾಂತರಗೊಂಡಿತು. ಇದಾದ ನಂತರ ಇಲ್ಲಿ ಗಲಭೆಗಳು ನಡೆದವು. ನಂತರ ದೇವಸ್ಥಾನಕ್ಕೆ ಬೀಗ ಹಾಕಲಾಯಿತು ಎಂದು ಪ್ರಚಲಿತದಲ್ಲಿರುವ ಕಥೆ.
ದೇವಾಲಯದ ಕಥೆ:
ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಗಲಭೆಗಳ ನಂತರ ತಾನು ತನ್ನ 82 ವರ್ಷದ ಚಿಕ್ಕಪ್ಪನೊಂದಿಗೆ ಮಸೀದಿಯ ಬಗ್ಗೆ ಚರ್ಚಿಸಿದರು ಎಂದು ಗುಪ್ತಾ ಹೇಳುತ್ತಾರೆ. ‘ಚಿಕ್ಕಪ್ಪ ನೆನಪುಗಳನ್ನು ಇನ್ನಷ್ಟು ತಾಜಾಗೊಳಿಸಿದರು. ಲೋಹದ ಸರಪಳಿಯ ಕೊನೆಯಲ್ಲಿ ಜೋಡಿಸಲಾದ ಗಂಟೆಯನ್ನು ನೋಡಿದ ನೆನಪಿದೆ. ಮಸೀದಿಯ ಮುಂಭಾಗದಲ್ಲಿ ಗಾಜಿನ ಚೌಕಟ್ಟಿನ ಹಾಳೆ ಇತ್ತು ಮತ್ತು ಅದರ ಮೇಲೆ ಗಿಳಿ ಹಸಿರು ಶಾಯಿಯಲ್ಲಿ ಹರಿಹರ ದೇವಾಲಯ ಎಂದು ಬರೆಯಲಾಗಿದೆ. ಆ ಚಿಹ್ನೆ ಏನಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ಇದಕ್ಕಿಂತ ಹೆಚ್ಚಿನ ಪುರಾವೆ ಏನು ಬೇಕು’ ಎಂದು ಗುಪ್ತಾ ಹೇಳಿದ್ದಾರೆ.
ಈಗ?
ಉತ್ತರ ಪ್ರದೇಶದ ಸಂಭಾಲ್ ಆಡಳಿತ ಮತ್ತು ಪೊಲೀಸರು ಅತಿಕ್ರಮಣ ಮಾಡಲಾಗಿದೆ ಎನ್ನಲಾದ ದೇವಸ್ಥಾನವನ್ನು ಪತ್ತೆ ಮಾಡಿದ್ದಾರೆ. ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳು ಕಂಡುಬಂದಿವೆ. ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಅಕ್ರಮ ವಿದ್ಯುತ್ ಸಂಪರ್ಕಗಳಿಗೆ ಕಡಿವಾಣ ಹಾಕುವ ಸಲುವಾಗಿ ತೆರಳಿದ್ದ ಅಧಿಕಾರಿಗಳಿಗೆ ಈ ವಿಚಾರ ತಿಳಿದು, ಈಗ ಎಲ್ಲೆಡೆ ಸುದ್ದಿ ಹರಡುತ್ತಿದೆ. ಸದರಿ ಪ್ರದೇಶವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಇಲ್ಲಿನ ಸ್ಥಳೀಯ ಆಡಳಿತ ಹೊಂದಿದೆ.
ಸಂಭಾಲ್ ಸಿಒ ಅನುಜ್ ಕುಮಾರ್ ಚೌಧರಿ ಮಾತನಾಡಿ, ಈ ಪ್ರದೇಶದಲ್ಲಿ ದೇವಸ್ಥಾನವನ್ನು ಅತಿಕ್ರಮಣ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. "ನಾವು ಸ್ಥಳವನ್ನು ಪರಿಶೀಲಿಸಿದಾಗ, ನಾವು ಅಲ್ಲಿ ಒಂದು ದೇವಸ್ಥಾನವನ್ನು ಕಂಡುಕೊಂಡಿದ್ದೇವೆ" ಎಂದು ಅವರು ಹೇಳಿದರು.
ಹೆಚ್ಚುವರಿ ಎಸ್‌ಪಿ ಶ್ರೀಶ್‌ಚಂದ್ರ ಮಾತನಾಡಿ, ‘ಕೆಲವರು ಮನೆ ನಿರ್ಮಿಸಿ ದೇವಸ್ಥಾನವನ್ನು ಒತ್ತುವರಿ ಮಾಡಿಕೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದ್ದು, ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿದ್ದು, ದೇವಸ್ಥಾನವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.
“ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳಿವೆ. ಈ ಪ್ರದೇಶದಲ್ಲಿ ಹಿಂದೂ ಕುಟುಂಬಗಳು ವಾಸವಿದ್ದವು ಮತ್ತು ಕಾರಣಾಂತರಗಳಿಂದ ಅವರು ಈ ಪ್ರದೇಶವನ್ನು ತೊರೆದರು. ದೇವಾಲಯದ ಸಮೀಪದಲ್ಲಿಯೇ ಪುರಾತನ ಬಾವಿಯ ಬಗ್ಗೆಯೂ ಮಾಹಿತಿ ಇದೆ” ಎಂದು ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ವಿಶೇಷವಾಗಿ ಮಸೀದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚರಂಡಿಗಳ ಉದ್ದಕ್ಕೂ ಅತಿಕ್ರಮಣಗಳು ನಡೆಯುತ್ತಿರುವ ಆತಂಕಕಾರಿಯಾಗಿದೆ. ಜಿಲ್ಲಾಡಳಿತವು ಶುಕ್ರವಾರ ಚಂಡೌಸಿ ನಗರದಲ್ಲಿ ಮೀಸಲಾದ ಅತಿಕ್ರಮಣ ತೆಗೆಯುವ ಅಭಿಯಾನವನ್ನು ಪ್ರಾರಂಭಿಸಿತು ಮತ್ತು ಅದನ್ನು ಸಂಭಾಲ್‌ನ ಇತರ ಭಾಗಗಳಿಗೆ ವಿಸ್ತರಿಸುತ್ತಿದೆ.
#WATCH | Uttar Pradesh: A temple has been reopened in Sambhal.
— ANI (@ANI) December 14, 2024
Patron of Nagar Hindu Sabha, Vishnu Sharan Rastogi claims that the temple has been re-opened after 1978. pic.twitter.com/UQdzODtuYa
"ಎರಡರಿಂದ ಮೂರು ತಿಂಗಳವರೆಗೆ ಅಭಿಯಾನ ಮುಂದುವರಿಯುತ್ತದೆ ಮತ್ತು ಎಲ್ಲಾ ಅತಿಕ್ರಮಣಗಳನ್ನು ತೆರವುಗೊಳಿಸಲಾಗುವುದು" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದರ್ ಪೆನ್ಸಿಯಾ ಹೇಳಿದರು.
#Sambhal Mandir | #ಸಂಭಾಲ್ ದೇವಾಲಯದ ರಹಸ್ಯ| #46 Years Hidden Shiva Temple Found
0 Comments:
ಕಾಮೆಂಟ್ ಪೋಸ್ಟ್ ಮಾಡಿ