ಕಳೆದ 29 ವರ್ಷಗಳಿಂದ ಜೋಯಿಡಾ ತಾಲೂಕಿನ ಗಣೇಶಗುಡಿಯ ಕೆ.ಪಿ.ಸಿ.ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಕ್ಷ್ಮೀಕಾಂತ ಎಂ.ಪಟಗಾರ ರವರಿಗೆ ಈ ವರ್ಷ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದ್ದು ಸೆಪ್ಟೆಂಬರ್ 5 ರಂದು ಶಿರಸಿಯ ಶ್ರೀ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಅವರಿಗೆ ಪ್ರಶಸ್ತಿ ಪ್ರದಾನವಾಗಲಿದೆ.
ಮೂಲತಃ ಕುಮಟಾ ತಾಲೂಕಿನ ಮಾಸೂರಿನ ಹೊಸ್ಕೇರಿಯ ಶಿಕ್ಷಕರಾಗಿದ್ದ ದಿ. ಮಹಾಬಲೇಶ್ವರ ಪಟಗಾರ ಮತ್ತು ಶ್ರೀಮತಿ ಪಾರ್ವತಿ ದಂಪತಿಗಳ ನಾಲ್ಕು ಮಕ್ಕಳಲ್ಲಿ ಮೂರನೆಯವರಾದ ಇವರು ಬಿ.ಎ., ಬಿ.ಪಿ.ಇಡಿ ಪದವೀಧರರಾಗಿದ್ದು ಅತ್ಯುತ್ತಮ ವಾಲಿಬಾಲ್ ಮತ್ತು ಕ್ರಿಕೇಟ್ ಆಟಗಾರರೂ ಆಗಿದ್ದಾರೆ. ರಂಗಕಲೆಯಲ್ಲಿ ಆಸಕ್ತಿಯುಳ್ಳ ಇವರು ಹಲವು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದು ಮಾತ್ರವಲ್ಲ ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆಯನ್ನೂ ಮಾಡಿದ್ದಾರೆ.
01 ಆಗಸ್ಟ್ 1994 ರಲ್ಲಿ ಸೇವೆಗೆ ಸೇರಿದ ಇವರು ತನ್ನ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಹೊರತರುವಲ್ಲಿ ಸಾಕಷ್ಟು ಶ್ರಮ ಹಾಕಿದ್ದಾರೆ. ಇವರ ವಿದ್ಯಾರ್ಥಿಯೋರ್ವನು ವಾಲಿಬಾಲ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಆಟಗಾರನಾಗಿ ಗುರುತಿಸಲ್ಪಟ್ಟಿದ್ದಾನೆ. ಇಲಾಖೆಯ ಕ್ರೀಡಾಕೂಟದಲ್ಲಿ ಕೆ.ಪಿ.ಸಿ.ಪ್ರೌಢಶಾಲೆಯ ಟೇಬಲ್ ಟೆನಿಸ್ , ಬಾಲ್ ಬ್ಯಾಡ್ಮಿಂಟನ್, ಶಟಲ್ ಬ್ಯಾಡ್ಮಿಂಟನ್ ಇವುಗಳಲ್ಲಿ ಯಾವುದಾದರೊಂದು ತಂಡ ಪ್ರತಿವರ್ಷ ವಿಭಾಗಮಟ್ಟ ಅಥವಾ ರಾಜ್ಯಮಟ್ಟದಲ್ಲಿ ಆಡುತ್ತದೆ ಎಂಬುದೇ ಇವರ ಕ್ರೀಡಾ ತರಬೇತಿಗೆ ಹಿಡಿದ ಕೈಗನ್ನಡಿಯಾಗಿದೆ.
ಶಾಲೆಯ ಎಲ್ಲಾ ದೈನಂದಿನ ಕಾರ್ಯಕಲಾಪಗಳು ಸುಗಮವಾಗಿ ಸಾಗಲು ಸದಾ ಕಾರ್ಯೋನ್ಮುಖರಾಗಿರುವ ಇವರು ಸಮಯ ಪ್ರಜ್ಞೆ ಹಾಗೂ ಶಿಸ್ತಿಗೆ ಸದಾ ಆದ್ಯತೆ ನೀಡುತ್ತಾ ಬರುತ್ತಿದ್ದಾರೆ.
ತನ್ನ ಈಗಿನ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಪೂರ್ವದ ವಿದ್ಯಾರ್ಥಿಗಳು, ಗಣೇಶಗುಡಿ ಮತ್ತು ಸುತ್ತಲಿನ ಯುವಕರಿಗೆ ಕ್ರೀಡೆಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ಕೂಡಾ ನೀಡುತ್ತಾ ಬರುತ್ತಿದ್ದಾರೆ. ತನ್ನ ಹುಟ್ಟೂರಿನಲ್ಲಿ ಕಳೆದ 29 ವರ್ಷಗಳಿಂದ ಪ್ರತಿವರ್ಷ ದೀಪಾವಳಿ ಹಬ್ಬದ ದಿನಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಾ ಬರುತ್ತಿದ್ದು ತಮ್ಮ ತಂದೆಯವರ ಹೆಸರಿನಲ್ಲಿ ಪ್ರತಿವರ್ಷ ಪ್ರಥಮ ಬಹುಮಾನ ತಾವೇ ನೀಡುತ್ತಿದ್ದಾರೆ.
ಗಂಡನ ಎಲ್ಲಾ ಕಾರ್ಯಗಳ ಹಿಂದಿನ ಶಕ್ತಿಯಾಗಿರುವ ಪತ್ನಿ ಶ್ರೀಮತಿ ಗೋದಾವರಿ , ಸಾಫ್ಟ್ವೇರ್ ಇಂಜನಿಯರುಗಳಾಗಿರುವ ಮಗಳು , ಮಗ ಹಾಗೂ ಇಂಜಿನಿಯರಿಂಗ್ ಓದುತ್ತಿರುವ ಇನ್ನೋರ್ವ ಮಗಳೊಂದಿಗೆ ಸುಸಂಸ್ಕೃತ ಬದುಕು ಬದುಕುತ್ತಿರುವ ಇವರು ಜೋಯಿಡಾ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದು ಎಲ್ಲರೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ. ಎಲ್ಲಾ ಕ್ರೀಡಾಕೂಟ ಅರ್ಥಪೂರ್ಣವಾಗಿ ನಡೆಯುವಲ್ಲಿ ತನು - ಮನ-ಧನ ಸಹಕಾರ ನೀಡುವ ಇವರು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಇವರಿಗೆ ಪ್ರಶಸ್ತಿ ಬಂದಿರುವುದು ನಿಜಾರ್ಥದಲ್ಲಿ ಪ್ರಶಸ್ತಿಗೆ ಮೌಲ್ಯ ಬಂದಿದೆ.. ಎಲ್ಲರೊಂದಿಗೆ ಸಮಭಾವ-ಸದ್ಭಾವದೊಂದಿಗೆ ಬೆರೆಯುವ ಇವರಿಗೆ ಪ್ರಶಸ್ತಿ ಬಂದಿರುವುದಕ್ಕೆ ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ.ಜೋಯಿಡಾದಲ್ಲಿ ಇಂತಹ ಬಹುಮುಖಿ ಶಿಕ್ಷಕರ ಸಂಖ್ಯೆ ಹೆಚ್ಚಲೆಂಬುದೇ ಎಲ್ಲರ ಹಾರೈಕೆಯಾಗಿದೆ.
Joida: L.M. Patgar honoured District Level Best Teacher Award
0 Comments:
ಕಾಮೆಂಟ್ ಪೋಸ್ಟ್ ಮಾಡಿ