ಕನ್ನಡ ನಾಡು ಅನೇಕ ಬಗೆಯ ಆಚಾರ, ವಿಚಾರ, ಕನ್ನಡದ ಉಚ್ಚಾರಣೆ, ಉಡುಗೆ, ತೂಡುಗೆ, ಸಂಸ್ಕೃತಿಗಳಿಂದ ಕೂಡಿದ ವೈವಿಧ್ಯಮಯ ನಾಡು. ಕನ್ನಡ ಚಲನಚಿತ್ರದಲ್ಲಿಯೂ ವಿವಿಧ ಕಡೆಗಳಲ್ಲಿನ ಕಥೆಗಳು ಹೆಚ್ಚು ಹೆಚ್ಚಾಗಿ ಬರಬೇಕೆನ್ನುವುದು ಸಿನಿಪ್ರಿಯರ ಆಶಯ. ಇತ್ತೀಚಿಗಷ್ಟೇ ನಟ ರಕ್ಷಿತ್ ಶೆಟ್ಟಿ ಅವರು ಕೂಡ ಇದೇ ಮಾತನ್ನು ಸಂದರ್ಶನ ಒಂದರಲ್ಲಿ ಹೇಳಿದ್ದರು. ಬೆಂಗಳೂರು,ಮೈಸೂರು, ಮಂಡ್ಯ ಭಾಗದ ಕಥೆಗಳನ್ನು ಒಳಗೊಂಡ ಅನೇಕ ಚಲನಚಿತ್ರಗಳು ಬಂದಿವೆ. ಇತ್ತೀಚೆಗೆ ಕರಾವಳಿ ಭಾಗದ ಚಿತ್ರಗಳು ಬರುತ್ತಿವೆ. ಆದರೆ ಉತ್ತರ ಕರ್ನಾಟಕ ಭಾಗದ ಕಥೆಗಳನ್ನು ಒಳಗೊಂಡ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕು ಎಂದು ಅಭಿಪ್ರಾಯ ಪಟ್ಟಿದ್ದರು ಇದೀಗ ಉತ್ತರ ಕರ್ನಾಟಕ ಶೈಲಿಯ ಪಕ್ಕ ಜವಾರಿ ಚಿತ್ರ "ಕ್ಷೇತ್ರಪತಿ" ಇಂದು ಬಿಡುಗಡೆಯಾಗಿದೆ.
ಅನ್ನದಾತರ ಸಂಕಷ್ಟ. ಅವರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಅನ್ಯಾಯವನ್ನೇ ಇಟ್ಟುಕೊಂಡ ಕಥೆ ಇದಾಗಿದೆ. ಈ ಸಿನಿಮಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮಗನಾಗಿ, ವಿಲನ್ ಸರ್ಜಾರ ವಿರುದ್ಧ ರೊಚ್ಚಿಗೇಳೋ ಯುವಕನ ಪಾತ್ರದಲ್ಲಿ ನವೀನ್ ಶಂಕರ್ (Naveen Shankar) ಮಿಂಚಿದ್ದಾರೆ.ಕೆಜಿಎಫ್ ಚಿತ್ರದ ಅಮ್ಮನ ಪಾತ್ರದಿಂದ ಖ್ಯಾತಿ ಪಡೆದ ಅರ್ಚನಾ ಜೋಯಿಸ್ ನಾಯಕಿಯಾಗಿ ನಟಿಸಿದ್ದಾರೆ. ನಟ ಅಚ್ಚುತ್ ಪ್ರಮುಖ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ರವಿ ಬಸ್ರೂರ್ ರವರ ಸಂಗೀತ ಸಿನಿಮಾದ ಸ್ಕ್ರೀನ್ ಪ್ಲೇ ಯನ್ನು ಇನ್ನೊಂದು ಲೆವೆಲ್ ಗೆ ಬೂಸ್ಟ್ ಮಾಡಿದೆ.
'ಕ್ಷೇತ್ರಪತಿ' ಪಕ್ಕಾ ಜವಾರಿ ಶೈಲಿಯ ಕನ್ನಡ ಸಿನಿಮಾ. ಉತ್ತರ ಕರ್ನಾಟಕದ ಭಾಗದ ಕಥೆಯನ್ನೇ ಇಟ್ಟುಕೊಂಡು ಸಿನಿಮಾವನ್ನು ಹೆಣೆಯಲಾಗಿದೆ. ಹೀಗಾಗಿ ಇದೊಂದು ಪಕ್ಕಾ ಉತ್ತರ ಕರ್ನಾಟಕದ ಸಿನಿಮಾ ಅಂತ ಹೇಳಬಹುದು ದೈಹಿಕವಾಗಿ, ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಶಕ್ತಿಯುತವಾಗಿಲ್ಲದ, ತುಳಿತಕ್ಕೊಳಗಾದ ಒಬ್ಬ ಸಾಮಾನ್ಯ ವ್ಯಕ್ತಿಯು ಹೇಗೆ ಕ್ರಾಂತಿಯ ಭಾಗವಾಗುತ್ತಾನೆ ಎಂಬುದು ಕ್ಷೇತ್ರಪತಿಯ ಕಥಾ ಹಂದರ.
ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿರುವ ಶ್ರೀಕಾಂತ್ ಕಟಗಿ ಅವರು ತಮ್ಮ ಸ್ವಂತ ಜೀವನದಿಂದ ಪ್ರೇರಿತರಾಗಿ ಕ್ಷೇತ್ರಪತಿ ಸಿನಿಮಾಗೆ ಜೀವ ತುಂಬಿದ್ದಾರೆ. ಮುಂಬೈನ ಕಂಪನಿಯೊಂದರಲ್ಲಿ ಒಳ್ಳೆಯ ಸಂಬಳ ಪಡೆಯುತ್ತಿದ್ದ ಉದ್ಯೋಗಿಯಾಗಿದ್ದ ಇವರು ಸಿನಿಮಾಕ್ಕಾಗಿಯೇ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಉತ್ತರ ಕರ್ನಾಟಕದವರು (ಗದಗ ಜಿಲ್ಲೆ) ಆದ್ದರಿಂದ ಜನರ ನಾಡಿಮಿಡಿತವನ್ನು ಬಲ್ಲವರಾಗಿದ್ದು, ಉತ್ತರ ಕರ್ನಾಟಕ ಖಡಕ್ ರೊಟ್ಟಿಯಂತೆಯೇ ಖಡಕ್ ಸಿನಿಮಾ ಮಾಡಿದ್ದಾರೆ.
ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡಬೇಕು ಅಂತ ಕನಸು ಕಾಣುವ ಹುಡುಗ ರೈತನಾಗಿ ಹೇಗೆ ಬದಲಾಗುತ್ತಾನೆ? ರೈತರ ಪರ ಹೋರಾಟಕ್ಕೆ ಯಾಕೆ ಇಳಿಯುತ್ತಾನೆ? ಅನ್ನೋದು ಸಿನಿಮಾ ಕಥೆ. ಅಂದ್ಹಾಗೆ ಹೀರೋ ಕೂಡ ರೈತಾಪಿ ಕುಟುಂಬದಿಂದನೇ ಬಂದಿರುತ್ತಾನೆ. ನಾಯಕನ ತಂದೆ ರೈತನಾಗಿದ್ದು, ಯಾವುದೋ ಒಂದು ಸಂಕಷ್ಟ ಸಿಲುಕಿ ಸಾವನ್ನಪ್ಪುತ್ತಾರೆ. ಆಗ ಹೀರೋ ಊರಿಗೆ ಎಂಟ್ರಿ ಕೊಡುತ್ತಾನೆ. ಅಲ್ಲಿ ನಡೆಯುತ್ತಿರೋ ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾನೆ. ಮುಂದೆ ಏನೆಲ್ಲಾ ಆಗುತ್ತೆ ಅನ್ನೋದನ್ನು ಥಿಯೇಟರ್ ಗೆ ಹೋಗಿ ನೋಡಬೇಕು.
ಕ್ಷೇತ್ರಪತಿ' ಸ್ಟೋರಿ ಪ್ರೇಕ್ಷಕರನ್ನು ನಾಟುವುದರಲ್ಲಿ ಎರಡು ಮಾತಿಲ್ಲ. ಆದರೆ, ಕಥೆ ಗಂಭೀರ ಇರುವುದರಿಂದ ಚಿತ್ರಕಥೆಗೆ ಇನ್ನೊಂದಿಷ್ಟು ಚುರುಕು ಮುಟ್ಟಿಸಬೇಕಿತ್ತು, ರೈತರ ಬವಣೆಯ ಕಥೆ ಕೊನೆಗೆ ವಿಲನ್ ಮೇಲೆ ಕೇಂದ್ರೀಕೃತವಾಗಿರುವುದು ಸ್ವಲ್ಪ ಗೊಂದಲಕ್ಕೆ ಎಡೆ ಮಾಡಿಕೊಡುತ್ತದೆ ನಾಯಕಿ ಪಾತ್ರಕ್ಕೆ ಇನ್ನು ಸ್ವಲ್ಪ ಸ್ಪೇಸ್ ಕೊಡಬಹುದಿತ್ತು ಎಂದು ಅನಿಸುತ್ತದೆ ಮೊದಲ ಅರ್ಧ ಬಹಳ ಚೆನ್ನಾಗಿ ಮೂಡಿ ಬಂದಿದೆ ದ್ವಿತೀಯ ಅರ್ಧ ಸ್ವಲ್ಪ ಉದ್ದ ಅನಿಸಿದರೂ ಒಟ್ಟಾರೆಯಾಗಿ ಸಿನಿಮಾ ಒಂದು ಒಳ್ಳೆಯ ಪ್ರಯತ್ನ ಉತ್ತರ ಕರ್ನಾಟಕದ ಮಂದಿ ಅಂತೂ ಇಷ್ಟಪಡುವುದು ಖಚಿತ ಉಳಿದ ಭಾಗದ ಜನರು ಇಷ್ಟಪಟ್ಟರೆ ಸಿನಿಮಾ ಗೆದ್ದಂತೆ.
0 Comments:
ಕಾಮೆಂಟ್ ಪೋಸ್ಟ್ ಮಾಡಿ