ಗಾಯಗಳನ್ನು ತೋರಿಸಿದ್ದಾರೆ ನೋಡಿರಿ..

ಮಣಿಪುರದ ಹಿಂಸೆ, ಹರಿಯಾಣದ ಗಲಭೆ, ಉಕ್ರೇನ್- ರಷ್ಯಾ ಯುದ್ಧ ಇವೆಲ್ಲ ಎಲ್ಲೋ ನಡೆದ ಘಟನೆ, ಒಂದು ಸುದ್ದಿ, ಮನಕಲಕುವ, ಹೃದಯವಿದ್ರಾವಕ ಸನ್ನಿವೇಶವಾಗಿ ತೋರುತ್ತಿತ್ತು. ಆದರೆ ಇದೆಲ್ಲ ನಮ್ಮ ಗಾಯಗಳು ಅಂತ ಅಂದ್ರೆ...! ಯಾಕೋ ತೀರ ಪರ್ಸನಲ್ ಆಗಿ ಫೀಲ್ ಆಗೋಕೆ, ಕಾಡೋದಕ್ಕೆ ಶುರುವಾಗತ್ತೆ. ಹೀಗಾಗಿದ್ದು ಡಾ ಶ್ರೀಪಾದ್ ಭಟ್ ನಿರ್ದೇಶನದ, ನಿರ್ದಿಗಂತ ತಂಡ ಪ್ರಸ್ತುತಪಡಿಸಿದ 'ಗಾಯಗಳು' ರಂಗ ಪ್ರಯೋಗ ನೋಡಿದ ಮೇಲೆ ದೇಹಕ್ಕಾದ ಗಾಯ ವಾಸಿಯಾಗಬಹುದು ಆದರೆ ಸಮಾಜಕ್ಕಾದ ಗಾಯ ಹಾಗೆ ಬಿಟ್ಟಷ್ಟು ಹೆಚ್ಚಾಗುತ್ತಾ ಹೋಗುತ್ತದೆ.

 ಎಲ್ಲದಕ್ಕಿಂತ ಮುಖ್ಯವಾಗಿ ಈ ಗಾಯ ಯಾಕಾಯಿತು? ಯಾರು ಮಾಡಿದ್ದರು? ಎಲ್ಲಾಯಿತು? ಹೇಗಾಯಿತು? ಅಂತ ಗೊತ್ತಾಗೋದು ಬಹಳ ಮುಖ್ಯ. ಕಾಯಿಲೆ ಡಯಾಗ್ನೋಸ್ ಆಗ್ದಿದ್ರೆ ಅದಕ್ಕೆ ಟ್ರೀಟ್ಮೆಂಟ್ ಕೊಡೋದಕ್ಕೆ ಆಗೋದಿಲ್ಲ. ನಿಜವಾಗಿ ಕಲೆ,ಸಾಹಿತ್ಯ ಮಾಡಬೇಕಾದ ಕೆಲಸವೇ ಅದು. ಇಂತಹ ಒಂದು ಡಯಾಗ್ನೋಸ್ ಸೆಂಟರ್ ನಿರ್ದಿಗಂತದ ರೂಪದಲ್ಲಿ ನಮಗೆ ಸಿಕ್ಕಿರೋದು ನಮ್ಮ ಪುಣ್ಯ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಖ್ಯಾತ ಬಹುಭಾಷಾ ನಟ, ಕರ್ನಾಟಕದವರಾದ ಪ್ರಕಾಶ್ ರಾಜ್ ರವರು ಇಂತಹ ಒಂದು ಸಂಸ್ಥೆಯನ್ನು ಕಟ್ಟಿ ಪೋಷಿಸುತ್ತಾ ಇದ್ದಾರೆ. ಕೀರ್ತಿಯ ಉತ್ತುಂಗದಲ್ಲಿರುವ ಪ್ರಕಾಶ್ ರಾಜ್ ರವರು "ಆನೆಯ ಮೇಲೆ ಕೂತವನಿಗೆ ನೆಲ ಕಾಣಿಸುವುದೇ?" ಎಂಬ ಗಾದೆ ಮಾತಿಗೆ ತದ್ವಿರುದ್ಧವಾಗಿದ್ದಾರೆ. ಅವರ ಪಾಡಿಗೆ ಅವರು ಸಿನಿಮಾ, ಆದ ತಾರಾ ಬಳಗ, ವರ್ಚಸ್ಸು, ಯಶಸ್ಸಿನೊಂದಿಗೆ ಯಾವುದಾದರೂ ಪಟ್ಟಣದ ಬಂಗಲೆಯಲ್ಲಿ ಐಷಾರಾಮಾದ ಜೀವನವನ್ನು ಸಾಗಿಸಬಹುದಿತ್ತು. ಆದರೆ ರಂಗನತಿಟ್ಟಿನ ಹಳ್ಳಿಯಲ್ಲಿ ನಿರ್ದಿಗಂತದ ಮೂಲಕ ಕಲಾವಿದರಿಗಾಗಿ ಒಂದು ಎಕ್ಸ್ಪರಿಮೆಂಟ್ ಸೆಂಟರ್ ಮಾಡಿದ್ದು ಆ ಮೂಲಕ ರಂಗನತಿಟ್ಟನ್ನು ರಂಗಭೂಮಿಯ ವೇದಿಕೆಯಾಗಿರಿಸಿದ್ದು ಸಮಾಜಕ್ಕೆ ಅವರು ನೀಡಿದ ಬಹುದೊಡ್ಡ ಕೊಡುಗೆ. ಅದರಲ್ಲಿಯೂ ಡಾ. ಶ್ರೀಪಾದ್ ಭಟ್ ರವರಂತಹ ಪ್ರಸ್ತುತ ಕನ್ನಡದ ಸೃಜನಶೀಲ ನಿರ್ದೇಶಕರನ್ನು ಗುರುತಿಸಿ ಅವರಿಂದ ಇಂತಹ ಪ್ರದರ್ಶನಗಳನ್ನು ಸಿದ್ಧಪಡಿಸಿ ನಾಡಿನಾದ್ಯಂತ ಪ್ರಯೋಗ ಗೊಳ್ಳುವಂತೆ ಮಾಡಿರುವುದು ಬಹುದೊಡ್ಡ ಕಾಣಿಕೆ. 

 ಡಾ. ಶ್ರೀಪಾದ್ ಭಟ್ ಕನ್ನಡದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರು. ಅದರಲ್ಲೂ ನಾಟಕ ಅಷ್ಟೇ ಅಲ್ಲದೆ ಕಥೆ, ಕವನಗಳನ್ನು ರಂಗಕ್ಕೆ ತರುವ ಅವರ ಕೌಶಲ್ಯ ಎಲ್ಲರೂ ಮೆಚ್ಚುವಂಥದ್ದು. ಅದಕ್ಕಾಗಿ ಅವರು ಮಾಡಿರುವ ಅಧ್ಯಯನ, ತಯಾರಿ ಬೆರಗು ಮೂಡಿಸುವಂತದ್ದು. ನಮ್ಮ ಸುತ್ತಣ ಕರ್ಕಶ ದನಿಯನ್ನು ಕಾವ್ಯವು ಮೃದುವಾಗಿಸಬಲ್ಲದು ಎಂಬ ಆಶಯವನ್ನು ಹೊತ್ತವರು ಅವರು. ಜಗತ್ತಿನ 26 ಲೇಖಕರ ಪಠ್ಯಗಳನ್ನು ಆರಿಸಿ ನಿರ್ದಿಗಂತ ತಂಡಕ್ಕೆ 'ಕಾವ್ಯ ರಂಗ' ಮತ್ತು 'ಗಾಯಗಳು' ಎನ್ನುವ ರಂಗ ಪ್ರಯೋಗವನ್ನು ಸಿದ್ಧಪಡಿಸಿದ್ದಾರೆ.

 ಹಾನಗಲ್ ತಾಲೂಕಿನ ಶೇಷಗಿರಿ ರಂಗಮಂದಿರದಲ್ಲಿ ದಿನಾಂಕ 15-8-2023 ರಂದು ಗಾಯಗಳು ನಾಟಕ ಪ್ರದರ್ಶನಗೊಂಡಿತು. ನಾಟಕದ ಆರಂಭದಲ್ಲಿ ಬರುವ ಪ್ರಕಾಶ್ ರಾಜರ ಧ್ವನಿಯಲ್ಲಿ ಬರುವ ಪ್ರದರ್ಶನದ ಪೀಠಿಕೆಯ ನಾಟಕಕ್ಕೆ ಒಂದೊಳ್ಳೆ ಪ್ರವೇಶಿಕೆಯನ್ನು ಒದಗಿಸಿತು. ನಾಟಕದಲ್ಲಿ ಹಲವಾರು ದೃಶ್ಯದ ತುಣುಕುಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಎಲ್ಲಾ ದೃಶ್ಯವನ್ನು ಪೋಣಿಸುವ ದಾರದ ಎರಡು ತುದಿಗಳೆಂದರೆ ಕಸಗುಡಿಸುವ ಇಬ್ಬರು ನಟರು. ಅಲ್ಲಿನ ಕಸದ ರಾಶಿಯಲ್ಲಿ ಬಿದ್ದಿರುವ ಸಮಾಜದ ತಲ್ಲಣಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಾಟಕ ಮುಗಿದರೂ ಕಸ ಗುಡಿಸಿ ಮುಗಿಯುವುದಿಲ್ಲ. ಅಷ್ಟೊಂದು ತಲ್ಲಣಗಳು, ಕರ್ಕಶಗಳು ರಾಶಿ ರಾಶಿ ಕಸಗಳು, ಕಥೆಗಳು.....

ನಟ ಪ್ರಕಾಶ ರಾಜ ಜೊತೆ ನಿರ್ದೇಶಕ ಶ್ರೀಪಾದ ಭಟ್

 ಯುದ್ಧ ಭೂಮಿ ರೈಲು ಭೋಗಿ ಕೋಮುಗಲಭೆ ಇವೆಲ್ಲ ದೃಶ್ಯಗಳನ್ನು ಅತ್ಯಂತ ಕಡಿಮೆ ರಂಗಸಜ್ಜಿಕೆ ಮತ್ತು ಪರಿಕರಗಳಿಂದ ನಟರೇ ಎಲ್ಲವೂ ಆಗಿ ಒಂದು ಕ್ಷಣವೂ ಪ್ರೇಕ್ಷಕರು ಅತ್ತಿತ್ತ ಕದಲದಂತೆ ಆ ಭೀಕರ ಗಾಯದ ನೋವನ್ನು ಅನುಭವಿಸುವಂತೆ ಮಾಡಿತು. ಅದಕ್ಕೆ ಪೂರಕವಾದ ಹಿನ್ನೆಲೆ ಸಂಗೀತ. ಯಾವಾಗಲೂ ಶ್ರೀಪಾದ್ ಭಟ್ಟರ ನಾಟಕದಲ್ಲಿ ಸಂಗೀತಕ್ಕೆ ಒಂದು ದೊಡ್ಡ ಸ್ಪೇಸ್ ಇರುತ್ತದೆ. ಗಾಯಗಳು ನಾಟಕದ ಸಂಗೀತ ಹೇಗಿತ್ತೆಂದರೆ, ದೃಶ್ಯಕ್ಕೆ ತಕ್ಕಂತೆ  ಸಂಗೀತವೋ.. ಸಂಗೀತದೊಳಗಿಂದ ದೃಶ್ಯವೋ ಎಂಬಂತೆ ಒಂದಕ್ಕೊಂದು ಸಮ್ಮಿಳಿತವಾಗಿತ್ತು. 

      ಮುಖ್ಯವಾಗಿ ಪಿರಾಂಡಲೊನ ಕಥೆ "ವಾರ್", ಕುವೆಂಪು ಅವರ "ಸ್ಮಶಾನ ಕುರುಕ್ಷೇತ್ರ" ನಾಟಕದ ದೃಶ್ಯ, ಸಾದತ್ ಹಸನ್ ಮಾಂಟೊರ "ಷರೀಫ್" ಕಥೆ, ಕೃಷ್ಣಮೂರ್ತಿ ಹಾನೂರರ "ಅಜ್ಞಾತನೊಬ್ಬನ ಆತ್ಮಚರಿತ್ರೆ" ಯ ಭಾಗಗಳ ದೃಶ್ಯಗಳು ಇನ್ನೂ ಕಣ್ಣಮುಂದೆ ಹಾಗೇ ಇದೆ.

ಅಷ್ಟೊಂದು ಸಂಗತಿಗಳನ್ನು ರಂಗದ ಮೇಲೆ ತರಲು ಅದೆಷ್ಟು ಶ್ರಮ, ಅದೆಷ್ಟು ಕಾಲ ಹಿಡಿದಿರಬಹುದು. ಶ್ರೀಪಾದ್ ಭಟ್ಟರ ಒಟ್ಟಾರೆ ಶ್ರಮದ ಸಾರ 1 ಗಂಟೆ 45 ನಿಮಿಷದ ನಾಟಕದ ಮೂಲಕ ಪ್ರೇಕ್ಷಕರ ಮನ ಮುಟ್ಟಿತು. ಅದೆಷ್ಟು ವಿಚಾರಗಳು ತುಂಬಿದೆ ಇದರಲ್ಲಿ. ನಾಟಕದಲ್ಲಿ ಬಳಸಿದ ಹಿಂದಿನ ಕ್ಯಾನ್ವಾಸ್, ಲೈಟಿಂಗ್, ನೇತು ಹಾಕಿರುವ ಬಟ್ಟೆಗಳ ಕೊಲಾಜ್, ಮೇಲಿನಿಂದ ಬೀಳುವ ಕಸದ ರಾಶಿ, ಒಂದೇ ಒಂದು ಪಾತ್ರ ಸ್ಮಶಾನದ ಭೀಕರತೆಯನ್ನು ಕಟ್ಟಿಕೊಡುವುದು, ನಟರ ಚಲನೆ, ಕಾಸಿಮ್ ಬಾಗಿಲು ಬಡಿಯುವ ಟೈಮಿಂಗ್, "ನಾನು ಶೋಕಿಸುವುದಿಲ್ಲ" ಎಂದು ಅಳುತ್ತಾ ಹೇಳುವುದು, ಕೊನೆಗೆ ಪ್ರೇಕ್ಷಾಂಗಣದಲ್ಲಿಯೂ ಕಸ ಗುಡಿಸುವುದು ಹೇಗೆ ಒಂದು ನಾಟಕ ಅನೇಕ ವಿಚಾರಗಳು.. ಅನೇಕ ಪ್ರಶ್ನೆಗಳು.. ಅನೇಕ ಉತ್ತರಗಳು.. ಇನ್ನೂ ಅನೇಕ, ಅನೇಕ, ನಿರ್ದಿಗಂತ...

-- ಸಂತೋಷ ಸಂಕೊಳ್ಳಿ

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive