ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಖರೀದಿಸುವ ಮುನ್ನ ಇದನ್ನ ಓದಿ!!!

 ಪರಿಸರ ಸ್ನೇಹಿ ಮತ್ತು ವಿಶ್ವಾಸಾರ್ಹ ಸಾರಿಗೆಯು ವಿಶ್ವದಾದ್ಯಂತ ನಗರಗಳಲ್ಲಿ ಪ್ರಾಬಲ್ಯ ಮೆರೆಯುತ್ತದೆ.

     ಸಂಚಾರ ದಟ್ಟಣೆ, ವಾಯು ಮಾಲಿನ್ಯ ಮತ್ತು ಸೀಮಿತ ಪಾರ್ಕಿಂಗ್ ಸ್ಥಳದ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಪರಿಹರಿಸುವ ಪ್ರಯತ್ನದಲ್ಲಿ, ಪ್ರಪಂಚದಾದ್ಯಂತದ ನಗರಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಕ್ರಾಂತಿಯನ್ನು ಕಾಣಬಹುದು. ಈ ವಾಹನಗಳು ಅವುಗಳ ಶೂನ್ಯ-ಹೊಗೆಕಾರಕದಿಂದಾಗಿ, ಅದರ ಅನುಕೂಲತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ರಸ್ತೆಯ ತುಂಬೆಲ್ಲ ಕಾಣಬಹುದು.

    ಒಂದು ಅಂಕಿ ಅಂಶದ ಪ್ರಕಾರ 88 ಎಲೆಕ್ಟ್ರಿಕ್‌ ಸ್ಕೂಟರ್‌ ಕಂಪನಿಗಳಿದ್ದು ಸರಿಸುಮಾರು 260 ಸ್ಕೂಟರ್‌ ಮಾಡೆಲ್‌ಗಳನ್ನ ಕಾಣಬಹುದಾಗಿದೆ.  2022 ರವರೆಗೆ ಒಂದು ಲೆಖ್ಖದ ಪ್ರಕಾರ 8,46,259 ಸ್ಕೂಟರ್‌ಗಳು ಮತ್ತು ಬೈಕಗಳು ಮಾರಾಟವಾಗಿದೆ ಎಂದರೆ ಅದರ ಮಾರುಕಟ್ಟೆ ಬಲ ಹೇಗಿರಬಹುದು ಎಂದು ಊಹಿಸಿ. 2013 ರಿಂದ ಪ್ರಾರಂಭವಾದ ಮಾರುಕಟ್ಟೆ ಪ್ರಾರಂಭದಲ್ಲಿ ಕೇವಲ 1989 ಯುನಿಟ್‌ಗಳು ಮಾರಾಟವಾದದ್ದು 2022ಕ್ಕೆ 6,15,365ಯುನಿಟ್‌ಗಳು ಮಾರಾಟವಾದವು.

    ಸುಧಾರಿತ ಎಲೆಕ್ಟ್ರಿಕ್ ಮೋಟರ್‌ಗಳು ಅತ್ಯಾಧುನಿಕ ಬ್ಯಾಟರಿ ತಂತ್ರಜ್ಞಾನದಿಂದ ಈ ವಾಹನಗಳು ಸಣ್ಣ ಮತ್ತು ಮಧ್ಯಮ ದೂರದ ಪ್ರಯಾಣಕ್ಕಾಗಿ ಹೇಳಿಮಾಡಿಸಿದಂತಿದೆ. ಇದರ ಉಪಯೋಗವು ವಾಯು ಮಾಲಿನ್ಯದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸುಸ್ಥಿರ ಸಾರಿಗೆ ಆಯ್ಕೆಗಳಿಗಾಗಿ ಈ ಬದಲಾವಣೆಯು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಹಸಿರು, ಹೆಚ್ಚು ವಾಸಯೋಗ್ಯ ನಗರಗಳನ್ನು ನಿರ್ಮಿಸುವ ಜಾಗತಿಕ ಬದ್ಧತೆಗೆ ಇದು ಹೊಂದಿಕೆಯಾಗುತ್ತದೆ.

    ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳ ಪ್ರಮುಖ ಅನುಕೂಲವೆಂದರೆ ಸಂಚಾರ ದಟ್ಟಣೆಯ ಮೂಲಕ ಸಲೀಸಾಗಿ ಚಲಿಸಿಕೊಂಡು ಹೋಗುವ ಸಾಮರ್ಥ್ಯ, ತಮ್ಮ ಕಾಂಪ್ಯಾಕ್ಟ್ ವಿನ್ಯಾಸ, ಹಗುರ ದೇಹ ರಚನೆ ಇತ್ಯಾದಿ ಅಂಶಗಳು ಟ್ರಾಫಿಕ್ ಜಾಮ್‌ಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಸಂಗ ಬರದಂತೆ ತಡೆಯುತ್ತದೆ. ಇದು ಪ್ರಯಾಣಿಕರಿಗೆ ಅಮೂಲ್ಯ ಸಮಯವನ್ನು ಉಳಿಸುವುದಲ್ಲದೆ ನಗರ ಪ್ರದೇಶಗಳಲ್ಲಿ ಸುಗಮ ಸಂಚಾರ ಮತ್ತು ಕಡಿಮೆ ದಟ್ಟಣೆಗೆ ಕೊಡುಗೆ ನೀಡುತ್ತದೆ

 ಇದಲ್ಲದೆ, ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳು ವೆಚ್ಚ-ಪರಿಣಾಮಕಾರಿ ಪ್ರಯಾಣದ ಆಯ್ಕೆಯನ್ನು ನೀಡುತ್ತವೆ. ಸಾಂಪ್ರದಾಯಿಕ ವಾಹನಗಳಿಗೆ ಹೋಲಿಸಿದರೆ, ನಿರ್ವಹಣಾ ವೆಚ್ಚವು ಗಮನಾರ್ಹವಾಗಿ ಕಡಿಮೆಯಾಗಿದೆ ಏಕೆಂದರೆ ಅವುಗಳಿಗೆ ಕನಿಷ್ಠ ನಿರ್ವಹಣೆ ಅಗತ್ಯವಿರುತ್ತದೆ. ಪ್ರಯಾಣಿಕರು ವೈಯಕ್ತಿಕ ಸಾರಿಗೆಯ ಅನುಕೂಲವನ್ನು ಆನಂದಿಸುವಾಗ ಇಂಧನದ ಹಣವನ್ನು ಉಳಿಸಬಹುದು. ಮತ್ತಷ್ಟಲ್ಲದೇ ಇನ್ನಿತರ ಖರ್ಚನ್ನೂ ಉಳಿಸಬಹುದು. "ಒಂದು ವರ್ಷದಿಂದ ಟೈರಿಗೆ ಗಾಳಿಯನ್ನೂ ಹಾಕಿಸದೇ ಓಡಿಸುತ್ತಿದ್ದೇವೆ, ಇನ್ನು ಕರೆಂಟ್‌ ಬಿಲ್‌ ಬಗ್ಗೆ ಕೇಳಿದ್ರೆ - ಒಟ್ಟು ಬಿಲ್‌ನಲ್ಲಿ 200-300 ಮಾತ್ರ ಬರ್ತಿದೆ", ಎಂದು ಒಬ್ಬ ಸಂತೃಪ್ತ ಗ್ರಾಹಕರ ಅಭಿಮತ.

 ಈ ವಾಹನಗಳು ಹಗುರವಾಗಿರುವುದರಿಂದ ಮತ್ತು ಅದರ ಸುಲಭ ರೈಡಿಂಗ್‌ಗಳಿಂದಾಗಿ ಎಲ್ಲಾ ವಯಸ್ಸಿನ ಮತ್ತು ದೈಹಿಕ ಸಾಮರ್ಥ್ಯಗಳ ಜನರ ಅಗತ್ಯಗಳನ್ನು ಪೂರೈಸುತ್ತವೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಜನಪ್ರಿಯತೆಯಲ್ಲಿ ತಾಂತ್ರಿಕ ಪ್ರಗತಿಯು ಪ್ರಮುಖ ಪಾತ್ರವನ್ನು ವಹಿಸಿದೆ. ಸಂಯೋಜಿತ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಜಿಪಿಎಸ್ ಟ್ರ್ಯಾಕಿಂಗ್, ಬ್ಯಾಟರಿ ಮಟ್ಟಗಳು ಮತ್ತು ಪ್ರಯಾಣದ ವಿವರ ಸೇರಿದಂತೆ ಸಮಯದ ಮಿತಿಯ ಮಾಹಿತಿಯನ್ನು ಬಳಕೆದಾರರಿಗೆ ಒದಗಿಸುತ್ತವೆ. ಇನ್ನೂ ಕೆಲವು ಸ್ಕೂಟರ್‌ ಮಾದರಿಗಳು ಸ್ವಯಂಚಾಲಿತ ಬ್ರೇಕಿಂಗ್ ಸಿಸ್ಟಮ್‌ಗಳು ಮತ್ತು ಅಂತರ್ನಿರ್ಮಿತ ದೀಪಗಳಂತಹ ಸ್ಮಾರ್ಟ್ ಸುರಕ್ಷತಾ ಕಾರ್ಯವಿಧಾನಗಳನ್ನು ಸಹ ಒಳಗೊಂಡಿರುತ್ತವೆ. ಆದರೆ ಈಗಿರುವ ತಂತ್ರಜ್ಞಾನ ಮಾತ್ರ ಮುಂದೆ ಬರಬಹುದಾದ ತಂತ್ರಜ್ಞಾನದ 10% ಎನ್ನುತ್ತಾರೆ ಪರಿಣಿತರು. ಅಂದರೆ ಅದರ ತಂತ್ರಜ್ಞಾನದ ಭವಿಷ್ಯವನ್ನ ಸೂಕ್ಮವಾಗಿ ತಿಳಿಯಬಹುದು.

 ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಕ್ರಾಂತಿಯು ವೇಗವನ್ನು ಪಡೆಯುತ್ತಿದ್ದಂತೆ, ಇದು ಜನರು ನಗರಗಳಲ್ಲಿ ಚಲಿಸುವ ವಿಧಾನವನ್ನು ಬದಲಾವಣೆ ಮಾಡುತ್ತಿದೆ. ಸ್ವಚ್ಛ ಗಾಳಿ, ಕಡಿಮೆ ಸಂಚಾರ ದಟ್ಟಣೆ ಮತ್ತು ಹೆಚ್ಚು ವಾಸಯೋಗ್ಯ ನಗರ ಪರಿಸರಕ್ಕೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ. ತಂತ್ರಜ್ಞಾನವು ವಿಕಸನಗೊಳ್ಳುತ್ತಲೇ ಇರುವುದರಿಂದ, ನಾಳಿನ ನಗರಗಳನ್ನು ರೂಪಿಸುವಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳು ಪ್ರಮುಖ ಪಾತ್ರವನ್ನು ವಹಿಸುವುದರೊಂದಿಗೆ ಅದರ ಭವಿಷ್ಯವನ್ನು ರೂಪಿಸುವಂತೆ ಕಾಣುತ್ತದೆ.

ಇದನ್ನು ಓದಿ:   ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳಿಗೆ ಅನ್ವಯಿಸುವ R.T.O. ನಿಯಮಗಳು.

 ಎಲೆಕ್ಟ್ರಿಕ್‌ ಸ್ಕೂಟರ್‌ ಕೊಳ್ಳುವ ಮೊದಲು ಗಮನಿಸಬೇಕಾದ ಅಂಶಗಳು:

 ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ನಮಗೆ ಬೇಕೇ ಎನಿಸುವ ಮಟ್ಟಿಗೆ ಆಗಿದೆ. ಅದನ್ನ ಖರೀದಿಸುವ ಮುನ್ನ ಈ ಕೆಳಗಿನ ಅಂಶಗಳನ್ನ ಗಮನದಲ್ಲಿಡಿ.

1. ಉದ್ದೇಶ: ನಿಮಗೆ ಗಾಡಿ ಯಾಕೆ ಬೇಕು ಎಂಬುದು ನಿಮಗೆ ಗೊತ್ತಿರಲಿ, ಹತ್ತಿರದ ಕಛೇರಿಗೆ ಹೋಗಿ ಬರುವ ಕಾರಣ, ಹತ್ತಿರದ ಮಾರುಕಟ್ಟೆ, ವ್ಯವಹಾರಕ್ಕೆ, ಹತ್ತಿರದ ಪ್ರವಾಸಕ್ಕೆ ಬಳಸಿಕೊಳ್ಳಬಹುದು. ಅದೂ ಕೂಡ ಹೋಗಿಬರಲು 30 ಕಿ.ಮಿ ಗಿಂತ ಒಳಗಿರಬೇಕು. ಅಂದಹಾಗೆ ಗಾಡಿ ತಗೊಂಡು ಸಾಹಸ ಮಾಡ್ತೇನೆ, ವೇಗವಾಗಿ ಓಡಿಸ್ತೇನೆ ವ್ಹೀಲಿಂಗ್‌ ಮಾಡ್ತೇನೆ ಅದು ಇದು ಅಂತ ಆಸೆ ತೀರಿಸಿಕೊಳ್ಳೋದಿಕ್ಕೆ ಖಂಡಿತ ಖರೀದಿ ಮಾಡ್ಬೇಡಿ. ಇನ್ನೂ ಕೂಡ ಅದರ ತಂತ್ರಜ್ಞಾನ ಅಷ್ಟೆಲ್ಲ ಬೆಳೆದಿಲ್ಲ.

2. ವೇಗ: ಈಗ ಎಲ್ಲಾ ವೇಗದ ಗಾಡಿಗಳು ಸಿಗುತ್ತಿವೆ. ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ಖರೀದಿಸಿ. ನೆನಪಿಡಿ 25 ಕಿ.ಮಿ ಗಿಂತ ಕಡಿಮೆ ವೇಗದ ಗಾಡಿಗೆ ರಿಜಿಸ್ಟ್ರೇಷನ್‌ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ನಿಮಗೆ ಅದಕ್ಕಿಂತ ಹೆಚ್ಚಿನ ವೇಗದ ಗಾಡಿ ಬೇಕಾದರೆ ಆರ್.ಟಿ.ಓ. ರವರ ಉಚಿತ ರಿಜಿಸ್ಟ್ರೇಷನ್‌ ಮಾಡಿಸಿ ಹಸಿರು ನಂಬರ್‌ ಪಟ್ಟಿ ಹಾಕಿಕೊಳ್ಳಿ. ಇನ್ನೂ ಒಂದು ನೆನಪಿಡಿ ನಿಮ್ಮ ಗಾಡಿಯ ವೇಗ ಹೆಚ್ಚಾದಷ್ಟು ಬ್ಯಾಟರಿಯ ತಾಳಿಕೆ ಕಡಿಮೆಯಾಗುತ್ತದೆ.

3. ಬ್ಯಾಟರಿ: ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಖರೀದಿಸಿದ ನಂತರ ನಮಗೆ ಕಾಡಿಸುವ ವಿಚಾರವೆಂದರೆ ಬ್ಯಾಟರಿಯ ಬಾಳಕೆ ಮತ್ತು ತಾಳಿಕೆ. ಹಾಗಾಗಿ ಅದರ ಕಡೆ ನಿಮ್ಮ ಗಮನ ಬಹಳ ಅವಶ್ಯಕ. ಉತ್ತಮ ಬ್ಯಾಟರಿ ಇದೆಯೋ ಅಥವಾ ಯಾವುದೋ ಕಳಪೆ ಮಟ್ಟದ ಬ್ಯಾಟರಿ ಇದೆಯೋ ನೋಡಿ. ಈಗಂತೂ ದೀರ್ಘ ಕಾಲೀನ ಬಾಳಿಕೆ ಬರುವ ಮತ್ತು ಬೇಗನೆ ಚಾರ್ಜ ಆಗುವ ಬ್ಯಾಟರಿಗಳು ಮಾರುಕಟ್ಟೆಗಳು ಮಾರುಕಟ್ಟೆಗೆ ಬಂದಿದ್ದು ನಿಮಗೆ ಪ್ರಯಾಣದ ಚಿಂತೆ ದೂರ ಮಾಡುತ್ತದೆ. ಲಿಥಿಯಂ-ಅಯಾನ್‌ ಬ್ಯಾಟರಿಗಳು ಸಧ್ಯ ಉತ್ತಮ ಎಂದಾಗಿದೆ ಹಾಗಾಗಿ ಬ್ಯಾಟರಿ ಪರಿಶೀಲಿಸಿ.

4. ತೂಕ ಮತ್ತು ತಯಾರಿಕಾ ಗುಣಮಟ್ಟ: ಇದು ಕೂಡ ಬಹಳ ಮುಖ್ಯ. ಮೊದಲಾದರೆ ಪೆಟ್ರೋಲ್‌ ಗಾಡಿಗಳಿದ್ದಾಗ ತಯಾರಕರು ಲೆಖ್ಖ ಇಡುವಷ್ಟಿದ್ದರು. ಆದರೆ ಈಗ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ತಯಾರಕರು ಅಣಬೆ ಹುಟ್ಟಿಕೊಂಡ ರೀತಿ ಇದ್ದಾರೆ. ಈಗ ಎಲ್ಲರೂ ವಾಹನ ತಯಾರಕರೆ!!! ಖರೀದಿ ಮಾಡುವ ಮೊದಲು ನೀವು ಹುಷಾರಾಗಿರಿ ಅಷ್ಟೆ. ನಾವು ಖರೀದಿ ಮಾಡ್ತಾ ಇರೋದು ರಸ್ತೆಯ ಮೇಲೆ ನಾವು ಸವಾರಿ ಮಾಡ್ಕೊಂಡು ಹೋಗುವ ಗಾಡಿ, ಹಾಗಾಗಿ ಅದರ ತಯಾರಿಕಾ ಗುಣಮಟ್ಟದ ಬಗ್ಗೆ ಗಮನ ಹರಿಸಿ. ನೀವು ಗಮನ ಹರಿಸಬೇಕಾದದ್ದು ಅದರ ಗಟ್ಟಿ ಮುಟ್ಟುತನ, ಕುಳಿತುಕೊಳ್ಳುವ ಸೀಟ್‌,  ಹ್ಯಾಂಡೆಲ್‌ ನಿಮ್ಮ ಕೈಗೆ ಸರಿಯಾಗಿ ಹೊಂದಾಣಿಕೆ ಆಗುತ್ತೋ ಇಲ್ಲವೋ, ಹಾರನ್ನ, ಇಂಡಿಕೇಟರ್‌ ಹಾಗು ಇತರೆ ಬಟನ್‌ಗಳನ್ನ ಸುಲಭವಾಗಿ ಬಳಸಬಹುದೋ ಹೇಗೆ ಎನ್ನುವುದನ್ನು ಗಮನಿಸಿ ಅದರ ಜೊತೆಗೆ ಬಹಳ ಪ್ರಮುಖವಾಗಿ ಅದರ ಸಸ್ಫೆನ್ಶನ್‌ ಮತ್ತು ಷಾಕ್‌ಗಳ ಗುಣಮಟ್ಟವನ್ನ ಪರಿಸೀಲಿಸಿ.ಇನ್ನೂ ಅನೇಕ ವಿವರಗಳನ್ನ ಒಬ್ಬನುರಿತ ಮೆಕಾನಿಕ್‌ ಸಹಾಯ ಪಡೆದು ಗಮನಿಸಿ. ನಾಳೆ ಈ ಗಾಡಿ ಓಡಿಸಿ ನನಗೆ ಬೆನ್ನು ನೋವು ಬಂತು ಅಥವಾ ನನ್ನ ಆರೋಗ್ಯ ಹಾಳಾಯ್ತು ಅಂತ ಆಗಬಾರದು ಅಲ್ವಾ!!!

5. ಸುರಕ್ಷತಾ ವೈಶಿಷ್ಟ್ಯಗಳು: ಗಾಡಿಯ ಬ್ರೇಕಿಂಗ್‌ ವ್ಯವಸ್ಥೆ ಈಗ ತುಂಬಾ ಸುಧಾರಿಸಿದೆ ಹಾಗಾಗಿ ನೀವು ಖರೀದಿ ಮಾಡಲು ಹೋಗುತ್ತಿರುವ ಗಾಡಿ ವ್ಯವಸ್ಥೆ ಹೇಗಿದೆ ಎಂಬುದನ್ನ ಗಮನಿಸಿ ಎ.ಬಿ.ಎಸ್.‌ ಇದೆಯೋ ಇಲ್ಲವೋ ನೋಡಿ. ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ ವ್ಯವಸ್ಥೆ ಇದ್ದರೆ ತುಂಬಾ ಅನುಕೂಲ. ಹೆಡ್‌ಲೈಟ್‌, ಟೈಲ್‌ ಲೈಟ್‌, ರಿಫ್ಲೆಕ್ಟರ್‌ಗಳನ್ನ ಸಾಕಷ್ಟು ಇಟ್ಟಿದ್ದಾರೆ ಎಂದು ಗಮನಿಸಿ. ಮಳೆ ಹೆಚ್ಚು ಬೀಳುವ ಪ್ರದೇಶವಾದರೆ ನೀರಿನಿಂದಾಗುವ ಅವಘಡ ತಪ್ಪಿಸಲು ಬೇಕಾದ ಅಂಶಗಳು ಗಾಡಿಯಲ್ಲಿ ಇವೆಯೇ ಪರಿಶೀಲಿಸಿ.

6. ಇತರೆ ಅಂಶಗಳು: ಎಲ್ಲಾ ಬೆಲೆಯ ವರ್ಗದಲ್ಲಿ ಎಲೆಕ್ಟ್ರಿಕ್‌ ಗಾಡಿಗಳು ದೊರೆಯುತ್ತಿರುವುದರಿಂದ ಬೆಲೆಗೆ ತಕ್ಕ ಹಾಗೆ ಅದರ ಫೀಚರ್‌ಗಳಿವೆಯೋ ಎಂಬ ಅಂಶ, ಕಾನೂನಿನ ಮಾನ್ಯತೆ ಆ ಗಾಡಿಗಿದೆಯೋ ಇಲ್ಲವೋ ಎಂಬ ವಿಷಯ ಮತ್ತು ನಾವು ಖರೀದಿ ಮಾಡಬೇಕೆಂದಿರುವ ಗಾಡಿಯ ಬಗೆಗಿನ ವಿಮರ್ಷೆ ಹೇಗಿದೆ ಎಂದು ತಿಳಿದುಕೊಳ್ಳಿ. ಹೀಗೆ ಒಂದಿಷ್ಟು ವಿಚಾರಗಳಿಗೆ ನೀವು ತೆರೆದುಕೊಂಡರೆ ಮತ್ತು ಅನುಭವಿಗಳ ಮಾರ್ಗದರ್ಶನ ಪಡೆದುಕೊಂಡರೆ ನೀವು ಒಂದೊಳ್ಳೆ ಎಲೆಕ್ಟ್ರಿಕ್‌ ಗಾಡಿಯ ಯಜಮಾನರಾಗುತ್ತೀರಿ.

 

 

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive