ಮೌನ ಮುರಿಯುವ ಮುನ್ನ " ಕವನ ಸಂಕಲನ ಓದು ಬರಹ.

ಶ್ರೀಮತಿ ಮಹಾದೇವಿ ಗೌಡ ಅವರ ಕವನ  ಸಂಕಲನ  ಮೌನ ಮುರಿಯುವ ಮುನ್ನ


    ಅಂತರಂಗದ ತಳಮಳ, ಬೇಗುದಿ, ದುಗುಡ, ದುಮ್ಮಾನಗಳೆಲ್ಲ ಮಾನವನ ಬದುಕಿಗೆ ಅನುಭವದ ಪಾಠ ಶಾಲೆ ಆಗಬೇಕು. ಹಾಗೆ ಆದಾಗಲೇ ಬದುಕು ಜಾಗ್ರತವಾಗಿದ್ದು, ಸುತ್ತಲಿನ ಪ್ರಪಂಚದಲ್ಲಿ  ಜಡವಾಗದೆ, ಚೇತನವಾಗಿದೆ  ಅಂತಃಕರಣ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಶ್ರೀಮತಿ ಮಹಾದೇವಿ ಯವರ ಕವನ ಅಂತದಕ್ಕೊಂದು ಉದಾಹರಣೆ, ಜೊತೆಗೆ   ಶಬ್ದಗಳನ್ನು  ಜೋಡಿಸಿರುವ  ಮನೋಹರತೆಯು ಎದ್ದು ಕಾಣುತ್ತದೆ. ಮಾನವನ   ನಿರಂತರ   ಭರವಸೆಯ ಸಾಗುವಿಕೆಯಲ್ಲಿ   ಬಿದ್ದ   ವಾಸ್ತವದ ಪೆಟ್ಟುಗಳು  ಅನುಭವಗಳಾಗಿ ಚಿತ್ರೀತವಾದಾಗ  ಅದು  ಓದುಗರಿಗೆ ಅವರ ಭಾವವರತೆಯಲ್ಲಿ ಹೌದೌದು ಅನಿಸಿದಾಗ   ಬರಹ  ಗೆಲ್ಲುತ್ತದೆ. ಕವಿತೆಯ  ಒಟ್ಟು  ಅರ್ಥ ಏನು ಅಂತ ಕೇಳಿದರೆ ಅದು ಓದುಗನ ಅಂತರಂಗದಲ್ಲಿ ಅವರವರಿಗೆ ಕೊಟ್ಟ ಆನಂದ ಅಥವಾ ಅನುಭವದಲ್ಲಿ. ಅಂತ ಓದನ್ನು ಕೊಡುವಲ್ಲಿ ಇಲ್ಲಿಯ ಕವಿತೆಗಳು ಗೆದ್ದಿದೆ. ಕವಿತೆ   ಓದುವಾಗ  ಭಾವವಾಗುತ್ತದೆ. ಮುಗಿದ ಮೇಲೆ   ಅಂತರಂಗದ ಅನುಭವವಾಗಿ ಬೇರೆ ಬೇರೆ ಕಾರಣದಿಂದ ಸುಖ ದುಃಖ ಎಲ್ಲವು ಆಗುತ್ತದೆ  ಅವರವರ ಜಾಯಮಾನಕ್ಕೆ.

 
    ಯಾವುದೇ, ಯಾರದೇ  ಕವಿತೆಯ ಸಾಲುಗಳು  ಇರಲಿ, ಬರೆದ  ಕವಿ ಅಥವಾ ಕವಯಿತ್ರಿಯ  ಬದುಕನ್ನು ಹತ್ತಿರದಿಂದ  ಬಲ್ಲವರಿಗೆ   ಅಲ್ಲಿಯ ಸಾಲುಗಳು   ಬೇಗ   ಅರ್ಥದ  ವಾಸ್ತವಕ್ಕೆ   ಸಿಕ್ಕಿ  ಬಿಡುತ್ತದೆ. ಉಳಿದವರಿಗೆ  ಕಲ್ಪನಾ  ವಿಹಾರವಾಗಿ, ಪದ  ಪುಂಜಗಳ ಜೋಡಣೆಯಾಗಿ, ಅಲ್ಲಿ   ಇಲ್ಲಿ ಒಟ್ಟು ಕವಿತಾ ಶಕ್ತಿಯ  ಉದಾಹರಣೆಯಾಗಿ, ಕವಯಿತ್ರಿ ಇಲ್ಲಿ ಈ ಸಾಲುಗಳಲ್ಲಿ ಹೀಗಾಗಿದ್ದಾಳೆ, ಈ ಕವಿತೆಯಲ್ಲಿ ಅವರ ಇನ್ನೊಂದು ನಿಲುವು ಹೀಗೆ ವ್ಯಕ್ತವಾಗಿದೆ ಅಂತೆಲ್ಲಾ   ಕಾಣಬಹುದು. ಆದರೆ  ಕವಯಿತ್ರಿ ಅಥವಾ ಕವಿಯ ಬದುಕನ್ನು  ಹತ್ತಿರದಿಂದ  ಬಲ್ಲವರಿಗೆ ಬರೆದವರ ಭಾವನಾತ್ಮಕ  ಗಟ್ಟಿ ನಿರ್ಧಾರ,  ಬದುಕಿನಲ್ಲಿ ಕಂಡುಕೊಂಡ ಸತ್ಯದ  ಅಂತಿಮ ಗತಿಯ  ಜೊತೆಗೆ   ನಾನೇನಾಗಬೇಕು ಎಂದಿರುವುದು ಬೇಗ ಕಾಣ ಸಿಗುತ್ತದೆ. ಹಾಗೆ ನೋಡಿದರೆ  "ಮೌನ ಮುರಿಯುವ ಮುನ್ನ"  ಕವಯಿತ್ರಿಯ ಮೌನ ಕವಿತೆಯಾಗಿ ಬಂದಿರುವುದು ಮೆಚ್ಚಲೇ ಬೇಕಾಗುತ್ತದೆ. ಆ ನೆಲೆಯಲ್ಲಿಯು ಕವನ ಸಂಕಲನ ಹೆಚ್ಚು ಆಪ್ತವಾಗಿಯು ನಿಲ್ಲುತ್ತದೆ. ತನ್ನ ಬದುಕಿನ ಪಾಡನ್ನು ಸತ್ಯ ಶೋಧನೆಗೆ ಬಳಸಿಕೊಂಡು ಅಲ್ಲಿ ಸಿಕ್ಕಿರುವ  ಅನುಭವಗಳನ್ನು  ಸಮಾಜಮುಖಿಯಾಗಿಸುವ ಬಯಕೆಯಲ್ಲಿ   ತನ್ನ ನೋವನ್ನು ಮರೆಯುವ ಯತ್ನ  ಇದೆಯಲ್ಲ  ಅದನ್ನು ಮೆಚ್ಚಲೇ ಬೇಕು. ಅವೆಲ್ಲವೂ ಕಾಳಜಿಯಾಗಿ ಸಮಾಜಕ್ಕೆ ಮುಟ್ಟಿಸುವುದು ಇಲ್ಲಿಯ ಕವಿತೆಯ ಹಂಬಲವಾಗಿದೆ. ಹಾಗಾಗಿ   ಕವನ ಸಂಕಲನವನ್ನು ಖರೀದಿಸಿ ಓದಬೇಕು. ಇದು ಕನ್ನಡದ  ಸಾಹಿತ್ಯಕ್ಕೆ  ಸೇರ್ಪಡೆ  ಆಗುವವರಿಗೆ ಕೊಟ್ಟ   ಗೌರವ  ಮಾನ್ಯತೆ  ಆಗುತ್ತದೆ.

/ಕಾಣಲಿಲ್ಲ ಪಲ್ಲವಿಯಲಿ
ಕವಿಯ ಮನದ ಅಣತಿಯ
ಕಾಣಲೆಂದೆ ಬದಿಯಲಿಟ್ಟೆ
ಹೃದಯವೆಂಬ ಹಣತೆಯ /
 
ಕನಸಿನ ಮದ್ಯೆ ವಾಸ್ತವ ಏನಾಗುತ್ತೆದೆ ಎನ್ನುವುದನ್ನು  ಕಡೆದು ಇಟ್ಟಂತೆ ಇದೆ.
 
    ಕವಿತೆಗಳು ಗೆಲ್ಲುವುದು ವಾಸ್ತವಕ್ಕೆ ಹತ್ತಿರ ಆದಾಗ. ಆದರೆ ಬದುಕು ಸೋಲುವುದು  ವಾಸ್ತವ   ಅಡ್ಡ ಬಂದಾಗ . ಇದು ಇಲ್ಲಿಯ ಸತ್ಯವಾಗಿ ಕಂಡುಬರುತ್ತದೆ. ತನ್ನ ತಾ ಕಾಣುವ ಶಕ್ತಿ ಇದ್ದವರಿಗೆ ಇತರ ವಿಷಯ,ವಸ್ತು, ಜೀವಗಳಲ್ಲಿ ಇರುವ  ಸತ್ಯವನ್ನು ಗುರುತಿಸಲು ಸಾಧ್ಯ. ಇಂತದ್ದೊಂದು ಸತ್ಯ ಗುರುತಿಸುವ  ಜೊತೆಗೆ  ಜೀವನದ ದಾರಿಯಲ್ಲಿ  ಹೇಳುತ್ತ ಸಾಗುತ್ತದೆ ಕವಿತೆಗಳು. ಜೀವದ ಅನಿರೀಕ್ಷಿತ  ತಲ್ಲಣವನ್ನು ಸಹಿಸಿ  ಲೋಕ  ಸತ್ಯವನ್ನು ಅರಸಿ ಹೋಗುವ ಹಾಗೆ  ಅದನ್ನು ಕವಿತೆಯಾಗಿಸುವ ಶಕ್ತಿ ಕವನದುದ್ದಕ್ಕೂ  ತುಂಬಿದೆ. ಕಹಿ ಘಟನೆಯನ್ನು  ಕವನದ ಮೂಲಕ ಸಿಹಿಯಾಗಿಸಿ ಕೊಳ್ಳುವುದಿದೆಯಲ್ಲ, ಕವಯಿತ್ರಿಯ  ಈ  ಶಕ್ತಿಯನ್ನು ಮೆಚ್ಚಲೇ ಬೇಕು.  ಕವಯಿತ್ರಿಯನ್ನು ಹತ್ತಿರದಿಂದ ಬಲ್ಲವರಿಗೆ  ಕವಿತೆ ಬೇಗ ಆಪ್ತವಾಗುತ್ತದೆ ಮಾತ್ರವಲ್ಲ ತನ್ನ ತಾನು ಕಾಣುತ್ತ ಅದರೊಳಗಿನ ಲೋಕ ಸತ್ಯ ಹೇಳುವ ಕೆಲಸವನ್ನು ಇಲ್ಲಿಯ ಕವಿತೆ ಮಾಡುತ್ತದೆ. ಮೊದಲ ಕವನ ಸಂಕಲನ ಎನ್ನುವ ಭಾವವನ್ನು ಹುಟ್ಟಿಸುವುದೇ ಇಲ್ಲ. ಕಲ್ಪನೆಯ ಮೇಲೆ ವಿಹರಿಸುವುದಕ್ಕಿಂತ ವಾಸ್ತವದ ಮೇಲೆ ನಡೆಯುವ ಸಾಲುಗಳು ಗಟ್ಟಿಯಾಗಿ ನಿಲ್ಲುತ್ತದೆ. ಇಲ್ಲಿಯ ಕವನ ವಾಸ್ತವ ಹುಡುಕುತ್ತ ಸಾಗುತ್ತದೆ. ಈ ನೆಲೆಯಲ್ಲಿ  ಕವನ ಸಂಕಲನ ಚನ್ನಾಗಿಯೇ ಮೂಡಿ ಬಂದಿದೆ. 
    ಪುಸ್ತಕದಿಂದ  ಬಂದ   ಹಣವನ್ನು  ಸಹ ಸಮಾಜಕ್ಕೆ  ನೀಡುವ ಸದುದ್ದೇಶ  ಕವಿಯಿತ್ರಿಗೆ ಇರುವುದರಿಂದ ಸಮಾಜದ ನಗುವಲ್ಲಿ ಕಾಣಬೇಕು ಎನ್ನುವ ವಾಸ್ತವ ಸತ್ಯದ ನಿರ್ಧಾರ ಮಹಾದೇವಿ ಗೌಡರ ಕವನದಲ್ಲಿ ಕಾಳಜಿ ಕಳಕಳಿಯಾಗಿ ಶರಾವತಿಯಂತೆ ಉದ್ದಕ್ಕೂ ಹರಿದಿದೆ.

- ಶಂಕರ ಗೌಡ ಗುಣವಂತೆ
Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels