ಅಪರೂಪದ ಸಾಧನೆಯತ್ತ ಗಿರೀಶ್ ನಾಯ್ಕ ಮಂಕಿ

    ಹೊನ್ನಾವರ: ಮನುಷ್ಯ ಬೆಳಗುವುದು ತನ್ನ ಚಿಂತನೆ, ಸಾಧನೆ, ಸಾಗಿದ ದಾರಿಯಿಂದ. ಸಾಧನೆ ಮಾಡಬೇಕು ಎನ್ನುವವರಿಗೆ ಹಲವು ದಾರಿ. ಸಾಧಿಸಲೇ ಬೇಕು ಎನ್ನುವ ಮನಸಿಗೆ ಒಂದೇ ದಾರಿ. ಸಮಾಜದಲ್ಲಿ  ಅಪರೂಪದ ಸಾಧನೆಯ  ದಾರಿ  ಕ್ರಮಿಸುವವರು ಕೆಲವರು. ಅಂತವರಿಗೆ ಪರಿಸರದ ಪ್ರೋತ್ಸಾಹ ಸಿಕ್ಕಾಗ ಸಮಾಜ ಮತ್ತು ಊರಿಗೆ ಹೆಮ್ಮೆಯಾಗಿ ನಿಲ್ಲುತ್ತಾರೆ. ಇವರು ಮಾಣಿಕ್ಯ ಪುರವೆಂದು ಇತಿಹಾಸದಲ್ಲಿ ಗುರುತಿಸಲ್ಪಟ್ಟ ಮಂಕಿಯ ತಾಳಮಕ್ಕಿಯ ಯುವ ಹೃದಯಿ, ಗಿರೀಶ್ ನಾಯ್ಕ.

 



 ತನ್ನ ಹಲ್ಲಿನಿಂದಲೇ ತೆಂಗಿನ ಕಾಯಿ ಸೊಲಿಯುವ ಸಾಹಸಿಗ:

     ಈಗಾಗಲೇ 8 ವೇದಿಕೆಯಲ್ಲಿ ತನ್ನ ಸಾಹಸ ಪ್ರದರ್ಶನ ಮಾಡಿರುವ ಇವರು 2019ರಲ್ಲಿ ರಾಮ ಕ್ಷತ್ರಿಯ ಸಮಾವೇಶದಲ್ಲಿ ಇವರ ಪ್ರತಿಭೆಗೆ ವೇದಿಕೆ ಕಲ್ಪಿಸಲಾಗಿತ್ತು. ಹಾಗೆ ಗುಡಿಮಕ್ಕಿ, ಬಳಕೂರು, ಬೈಂದೂರು, ಮೊದಲಾದ ಊರುಗಳಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಾಧನೆಯ ಹಂಬಲಕ್ಕೆ ಬೆಂಬಲ ಕಂಡರು. ಈಗಾಗಲೇ 15 ರಿಂದ 30 ಸೆಕೆಂಡಗಳಲ್ಲಿ ಒಂದು ತೆಂಗಿನ ಕಾಯಿಯ ಸಿಪ್ಪೆ ಬಿಡಿಸಬಲ್ಲರು. ಇಲ್ಲಿಯ ತನಕ ಸುಮಾರು 80ಕ್ಕೂ ಹೆಚ್ಚು ತೆಂಗಿನ ಕಾಯಿಯನ್ನು ಹಲ್ಲಿನಿಂದ ಸೊಲಿದವರು. ಈಗ 1 ನಿಮಿಷದಲ್ಲಿ 3 ತೆಂಗಿನಕಾಯಿ ಸೊಲಿಯುವ ಅಪರೂಪದ ಸಾಧನೆಯ ಪ್ರಯತ್ನದಲ್ಲಿ ಇದ್ದಾರೆ. 

http://

 ಇದೇನು ಜಾದು ಅಲ್ಲ, ಮಾಟ, ಮಂತ್ರ, ತಂತ್ರ ಅಲ್ಲ.  ಗ್ರಾಮೀಣ ಭಾಗದಲ್ಲಿ ವೀಳ್ಯದೆಲೆ ಕೊಯ್ಯುವಾಗ ಬೆರಳ ಉಗುರಿಗೇ ಕಬ್ಬಿಣದ ಉಗುರನ್ನು ಹಾಕಿಕೊಳ್ಳುತ್ತಾರೆ ಅಂತಹುದ್ದರಲ್ಲಿ ಗಿರೀಶ್ ನಾಯ್ಕರು ತನ್ನ ದಂತ ಪಂಕ್ತಿಗೆ ಯಾವುದೇ ರಕ್ಷಾ ಕವಚ ಇಲ್ಲದೆ ತೆಂಗಿನ ಕಾಯಿ ಸಿಪ್ಪೆ ತೆಗೆಯುವ ಸಾಧನೆ ಮಾಡಿದವರು, ಮಾಡುತ್ತಾ ಇರುವವರು.

 ಬಹುಮುಖ ಪ್ರತಿಭೆಯ ಖಣಿ:

    ಸುಮಾರು 20 ವರ್ಷದಿಂದ ಗಾಡಿ ವಾಶಿಂಗ್ ಸರ್ವಿಸ್ ಸೆಂಟರ್ ಸ್ವಉದ್ಯೋಗ  ಮಾಡುತ್ತಿರುವ ಗಿರೀಶ್ ಬಹು ಅಪರೂಪದ ಸಾಧನೆಯ ಕನಸು ಕಂಡವರು. ಇದು ಇವರ  ಸಾಹಸದ  ಸಾಧನೆ  ಒಂದು ಮುಖವಾದರೆ, ಗಿರೀಶ್ ನಾಯ್ಕರು  ಸಾಮಾಜಿಕ ರಂಗಭೂಮಿಯ ಕಲಾವಿದರು ಹೌದು. ಸಾಮಾಜಿಕ ನಾಟಕದಲ್ಲಿ ಖಳನಾಯಕ, ಕಥಾನಾಯಕ, ಪಾತ್ರವನ್ನು ಅಷ್ಟೇ ಜೀವಂತಿಕೆಯಿಂದ ಅಭಿನಯಿಸುವ ಕಲಾ ಪ್ರಜ್ಞ. ಸ್ತ್ರೀ ಪಾತ್ರವನ್ನು  ಮಾಡಿರುವುದು  ಮಾತ್ರವಲ್ಲದೆ , ಗುಣವಂತೆಯ  ಶ್ರೀ ಕೃಷ್ಣ ಭಂಡಾರಿಯವರಲ್ಲಿ ಯಕ್ಷಗಾನವನ್ನು  ಕಲಿತು ಹವ್ಯಾಸಿ ಕಲಾವಿದರೊಟ್ಟಿಗೆ ಯಕ್ಷಗಾನ ರಂಗಭೂಮಿಯಲ್ಲಿ ಹೆಜ್ಜೆಯನ್ನು ಸಹ ಇಟ್ಟವರು. ಬಹುಮುಖ ಆಸಕ್ತಿಯ  ಯುವ ಹೈದನಿಗೆ ಅಭಿನಯ ಹಾಗೂ ಸಾಹಸದ ಮೂಲಕ ಏನಾದರೊಂದು ಸಾಧನೆ ಆಗಬೇಕು, ಬದುಕು ಸುಮ್ಮನೆ ವ್ಯರ್ಥ ಆಗಬಾರದು ಎನ್ನುವ ಅಂತರಂಗಿಕ ಪ್ರಜ್ಞೆಯ ತುಡಿತ ಇದೆ.

    ಸಾಧನೆ ಎನ್ನುವುದು ನಿರಂತರ ಪ್ರಯತ್ನದ ಬೆನ್ನೇರಿದಾಗ ಮಾತ್ರ ಸಾಧ್ಯ. ಆ ದಾರಿಯಲ್ಲಿ ಸಾಗುವ, ಸಾಗುತ್ತಿರುವ ಗಿರೀಶ್ ನಾಯ್ಕರ ಸಾಧನೆಗೆ ಮೊದಲು ಆಯಾ ಸಮಾಜ ಜೊತೆಗೆ ನಿಂತಾಗ ಮಾತ್ರ ಮುಂದೆ ಇತರ ಸಮಾಜವು ಗೌರವಿಸುವುದಕ್ಕೆ ಬರುವಂತಾಗುತ್ತದೆ. ಹಾಗೆ ಬರುವುದು ಗಿರೀಶ್ ನಾಯ್ಕರ ಸಮಾಜಕ್ಕೂ ಸಿಗುವ ಗೌರವವಾಗಿ ಮಾರ್ಪಡುತ್ತದೆ. ವ್ಯಕ್ತಿಯ ಸಾಧನೆಯ ಹಿಂದೆ ಸಮಾಜದ ಬೆಂಬಲ ಇಲ್ಲದೆ ಹೋದರೆ ಮುಂದೆ ಕಳೆದು ಹೋದಾಗ ಮರುಗಿಯೂ ವ್ಯರ್ಥವೇ ಸರಿ. ಗಿರೀಶ್ ನಾಯ್ಕರ  ಮನೋ ಚೈತನ್ಯದ ಆತ್ಮಬಲವೇ ಇವರ ಸಾಧನೆಗೆ ಪ್ರೇರಣೆಯ ಮೂಲ.

     ಇದಕ್ಕೊಂದು ಪರಿಸರದ ಬೆಂಬಲ ಸಿಕ್ಕಿದರೆ ಮುಂದೆ ಅದು ಇತಿಹಾಸ ಆಗುವುದಕ್ಕೂ ಬಾಗಿಲು ತೆರೆಯುತ್ತದೆ. ಪ್ರತಿಭಾನ್ವಿತರು ಎಲ್ಲ ಸಮಾಜದಲ್ಲೂ ಇದ್ದಾರೆ. ಮನೆಯ ವೈಚಾರಿಕಕತೆ, ಸಂಸ್ಕೃತಿ ಚಿಂತನೆಯ ಬಲ ಕಡಿಮೆ ಇದ್ದಲ್ಲಿ ಪ್ರತಿಭೆ ಸೊರಗುತ್ತದೆ. ಪ್ರೋತ್ಸಾಹದ  ಜಲ  ಸದಾ ಇರುವಲ್ಲಿ ಅದು ಮರವಾಗಿ ಹುಲೂಸಾಗಿ ಬೆಳೆದು ಅಮರವಾಗುತ್ತದೆ.
ಕೊನೆಯ ಪಕ್ಷ  ಮನೆಯಲ್ಲಿ ಸಿಗದೇ ಇದ್ದರು ಪರಿಸರ, ಸಮಾಜ, ಸಂಘ, ಸಂಸ್ಥೆ  ಪ್ರಜ್ಞೆಯ  ಮನಸ್ಥಿತಿಯ ಬೆಂಬಲವಾದರು ಸಿಗಬೇಕು. ಗಿರೀಶ್ ನಾಯ್ಕರಿಗೆ ಅಂತದ್ದೊಂದು ಬೆಂಬಲ ಬೇಕಾಗಿದೆ ಅವರ ಸಾಧನೆಯ ಹಂಬಲಕ್ಕೆ.ಅಂತ ಬೆಂಬಲ ಸಿಗುವಂತಾಗಿ ಅವರ ಸಾಧನೆ ಸಮಾಜಕ್ಕೆ ಮಾದರಿಯಾಗಿ, ಸಾಧಿಸುವ ಮನಸಿಗೆ ಪ್ರೇರಣೆಯ ನಂದಾದೀಪವಾಗಲಿ.

:9986548305

 ಶಂಕರ ಗೌಡ, ಹಳ್ಳಿ ನ್ಯೂಸ್
ಗುಣವಂತೆ





Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive