ಹೀಗೆ ಹೇಳುವುದಕ್ಕೆ ಬಲವಾದ ಕಾರಣ ಉಂಟು. ಒಮ್ಮೊಮ್ಮೆ ಹೇಳದೆ ಹೋದರೆ, ಹೇಳಬೇಕು ಎಂದುಕೊಂಡಾಗ ಅವರೇ ಇರುವುದಿಲ್ಲ. ಎದುರಿಗೆ ಹೇಳದೆ ಹೋದ ಪಶ್ಚತ್ತಾಪ ಮಾತ್ರ ಇರುತ್ತದೆ. ಮಾತ್ರವಲ್ಲ ಆಗಾಗ ಕಾಡುತ್ತ ಸಾಗುತ್ತದೆ. ಸ್ಮರಿಸಿಕೊಳ್ಳಲು ಅರ್ಹತೆ ಹಾಗೂ ಯೋಗ್ಯತೆ ಇದ್ದವರನ್ನು ನಮ್ಮ ಜೊತೆಗೆ ಇರುವಾಗಲೇ ಒಮ್ಮೆಯಾದರು ಸ್ಮರಿಸಲೇಬೇಕು. ಹಾಗಾದಾಗ ಮಾತ್ರ ಬಾಳ್ವೆ ಅರ್ಥಪೂರ್ಣವಾಗುತ್ತದೆ.
ಎಲ್ಲರ ಹೃದಯದ ಆಳ ಪರಿಶುದ್ಧ ಮತ್ತು ಪಾವನವಾಗಿಯೇ ಇರುತ್ತದೆ. ಆ ಭಾವ ಪ್ರೇಮವ ನೋಡಲಾಗದ ಅಂತರಂಗದ ಕಣ್ಣಿಗೆ ಜೀವನದಲ್ಲಿ ತುಂಬಿರುವ ಮಾನವ ಜನ್ಮ ಪ್ರೀತಿ ಗೋಚರಿಸುವುದೇ ಇಲ್ಲ. ಹಾಗಾಗಿ ಅದು ತನ್ನ ಅಸ್ತಿತ್ವವನ್ನು ವಿಸ್ತಾರವಾಗಿ ಹಬ್ಬಿಸಿ ಕೊಳ್ಳದೆ ಕುಂಟಿತವಾಗಿ ಬಿಡುತ್ತದೆ.
ಅಂತರಂಗದ ತುಂಬಾ ತುಂಬಿರುವ ಒಲುಮೆಯನ್ನು ಬಿತ್ತಿದವರು ಮಾತ್ರ ಉಳಿದು ಬಿಡುತ್ತಾರೆ. ಈಗ ವಿಷಯಕ್ಕೆ ಬರೋಣ..
ಜಾತಿಯಲ್ಲಿ ಹವ್ಯಕ ಹೆಣ್ಣು. ಇವಳು ಮದುವೆ ಆಗಿದ್ದು ನಮ್ಮ ಅಣ್ಣನನ್ನು. ನನಗೆ ಸಂಬಂಧದಲ್ಲಿ ಅತ್ತಿಗೆ, ಆದರೆ ಸತ್ಯವಾಗಿ ಹೇಳಲೇ ಬೇಕು ಎಂದರೆ ದೇವರಿಗಿಂತ ಮಿಗಿಲಾಗಿ ಕಂಡಿದ್ದಾಳೆ. ಬಹುಶಃ ಉತ್ತರ ಕನ್ನಡಲ್ಲಿಯೇ ಇವರದ್ದು ಮೊದಲ( ನಾವು ಮಾಡಿಕೊಂಡ ) ಅಂತರ್ಜಾತಿ ವಿವಾಹ ಇರಬಹುದು! ಆದರೆ ಆಗಿನವರ ಮನಸ್ಥಿತಿಗೂ ಈಗ ಈ ರೀತಿಯ ಮದುವೆ ಆಗುವವರ ಮನಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಈಗಿನವರಿಗೆ ಕೂಡು ಕುಟುಂಬ ಬೇಡ, ನಾನು ನನ್ನ ಗಂಡ ಇಬ್ಬರೇ ಇರಬೇಕು, ಮೂರನೆಯವರ ರಿಸ್ಕ ನಮಗೆ ಬೇಡ, ಇನ್ನೂ ಹಲವು. ಆದರೆ ಆಗಿನವರ ಮನಸ್ಥಿತಿ ಅಷ್ಟು ಸ್ವಾರ್ಥ ಭಾವದ ಇಳಿತ ಇರಲಿಲ್ಲ. ಇದಕ್ಕೆ ಇವರೇ ಉದಾಹರಣೆ.
ತಾನೊಬ್ಬ ಹೈವಕ ಜಾತಿಯ ಹೆಣ್ಣಾಗಿ, ಪ್ರೀತಿಸಿ ಮದುವೆಯಾದ ಕಾರಣ, ಬೇರೆ ಯಾರ ಜವಾಬ್ದಾರಿಯು ನಮಗೆ ಬೇಡ ನಾನು ನನ್ನ ಗಂಡ ಮಕ್ಕಳು ಅಂತ ಬದುಕನ್ನು ಸಾಗಿಸಬಹುದಿತ್ತು. ಹಾಗೆ ಬದುಕಿದರೆ ತಪ್ಪೇನು ಇರಲಿಲ್ಲ. ಅವರ ಬದುಕು, ಅವರ ಇಚ್ಛೆ ಆಗಿರುತ್ತಿತ್ತು. ಹಾಗೆ ಆಗದೇ ಸಮಷ್ಟಿ ಪ್ರಜ್ಞೆಯ ಮಹಾ ಕರ್ತವ್ಯ ಪಾಲನೆಯ ಹೆಣ್ಣಾಗಿ ಬದುಕಿದಳು.ನಮ್ಮದೇ ಜಾತಿಯ ಹೆಣ್ಣಾಗಿದ್ದರು ಇಷ್ಟು ತ್ಯಾಗದ ಬದುಕನ್ನು ನೀಡುತ್ತಿದ್ದಳು ಎನ್ನುವ ಯಾವ ಭರವಸೆಯು ನನಗಿಲ್ಲ.
ನಮ್ಮದು ಹತ್ತಾರು ಜನ ಇರುವ ಮನೆಯಾಗಿತ್ತು. ಮದುವೆಯಾಗಿ ಬಂದ ದಿನದಿಂದಲೇ ಎಲ್ಲರೊಟ್ಟಿಗೆ ಬಾಳುವೆ ಮಾಡುವ ಮನಸ್ಸಿನ ಮಹಾ ಸಂಕಲ್ಪಕ್ಕೆ ಸಿದ್ದಳಾಗಿಯೇ ಬಂದಿರಬೇಕು ಎನಿಸುತ್ತದೆ ಈಗ ಆಲೋಚನೆ ಮಾಡಿದರೆ. ಮನೆಯ ಹಿರಿಯ ಸೊಸೆ ಎನಿಸಿಕೊಂಡು ಬಂದ ಹೆಣ್ಣಿನ ಜವಾಬ್ದಾರಿ ಏನೆಲ್ಲಾ ಇರುತ್ತದೋ ಅದೆಲ್ಲದಕ್ಕೂ ಉಳುಮೆ ಮಾಡುವ ಎತ್ತು ನೋಗವ ಹೊರುವಂತೆ , ಹೊತ್ತಿದ್ದಾಳೆ. ಕೆಲವು ಸಮಯ ಮನೆಯಲ್ಲಿ ಗಂಜಿಯೇ ಗತಿಯಾದರು ತನ್ನ ಧರ್ಮವನ್ನು ಎಂದು ಬಿಡದೆ ಪಾಲಿಸಿದ್ದಾಳೆ. ಅಪ್ಪ ಅವ್ವ ಅನಾರೋಗ್ಯಕ್ಕೆ ತುತ್ತಾದಾಗಲು,ಏನೆಲ್ಲಾ ಸೇವೆ ಮಾಡಬೇಕೋ ಎಲ್ಲವನ್ನು ಮಾಡಿದ್ದಾಳೆ. ಇಡೀ ಸಂಸಾರಕ್ಕೆ ಬೇಕಾದ ಸಾಮಾನುಗಳನ್ನು ತನ್ನದೆ ಹಣದಿಂದ ತಂದಿದ್ದಾಳೆ.
ಎಲ್ಲಿಯಾದರೂ ಮಧ್ಯರಾತ್ರಿ ಮನೆಗೆ ಬಂದಾಗಲೂ ತನ್ನ ನಿದ್ರೆಯನ್ನು ಮರೆತು ಊಟ ಬಡಿಸಿ ಬಟ್ಟಲು ತೊಳೆದಿಟ್ಟೆ ಮಲಗಿದವಳು, ಬಾಯಾರಿ ಬಂದಾಗ ಕೇಳುವ ಮೊದಲೆ ನೀರನಿತ್ತಿದ್ದಾಳೆ. ಹಸಿವೆಯಾಗಿ ಬಂದಾಗ ಹೇಳುವ ಮೊದಲೆ ಅನ್ನ ಇಟ್ಟು ಕರೆದಿದ್ದಾಳೆ.
ಸ್ವಂತ ಅಕ್ಕ ತಂಗಿ ಇಲ್ಲ ನಮಗೆ, ಆದರೆ ಚಿಕ್ಕಪ್ಪನ ಮಕ್ಕಳೇ ನಮಗಿರುವ ಅಕ್ಕತಂಗಿಯರು, ಅವರನೆಲ್ಲ ಅತ್ಯಂತ ಅಕ್ಕರೆಯಿಂದಲೇ ಕಂಡಿದ್ದಾಳೆ, ಅವರನೆಲ್ಲ ಗೌರವದಿಂದ ಅಷ್ಟೇ ಪ್ರೀತಿಯಿಂದ ಆದರಾದಿತ್ಯ ನೀಡಿದ್ದಾಳೆ. ಮನೆಗೆ ಬರುವ ಬಂಧು ಬಳಗದ ಎಲ್ಲರನ್ನು ಪ್ರೀತಿಯಿಂದ ಉಪಚರಿಸಿದ್ದಾಳೆ.
ಮಣಿಪಾಲದಂತ ಆಸ್ಪತ್ರೆಗೆ ಹೋಗುವಂತ ಸಂದರ್ಭ ಬಂದಾಗಲೂ ನಮ್ಮ ಜೊತೆಗೆ ಇದ್ದು ವಾರಗಟ್ಟಲೆ ಆರೈಕೆಗೆ ಹೃದಯ ತೆರೆದಿದ್ದಾಳೆ. ಕೇರಿಯ ಯಾರದೇ ಮನೆಯ ಹೆಂಗಸರ ಹೆರಿಗೆಯ ಹೊತ್ತಲ್ಲಿ ಸೋಲ್ಪ್ ಜೊತೆಗೆ ಬಾ ಎಂದು ಮಧ್ಯರಾತ್ರಿಯಲ್ಲಿ ಕರೆದಾಗಲು ಸೊಲ್ಪವೂ ಬೇಸರಿಸದೆ ಅತ್ಯಂತ ಖುಷಿಯಿಂದ ಅವರ ಜೊತೆ ಸಾಗಿದವಳು. ತಾನು ತಿನ್ನುವುದಕ್ಕೆ ಏನೆಲ್ಲಾವನ್ನು ತಂದರು ಎಂದು ಕೊಡದೆ ತಿಂದವಳಲ್ಲ.
ಇದೆಲ್ಲ ಮನೆಮಂದಿಯ ನಮಗೆ ಆದರೆ ತನ್ನ ಗಂಡ ಅನ್ಯ ಆಹಾರ ತಿನ್ನುವಾಗ, ಅನ್ಯ ಆಹಾರ ಮುಟ್ಟದೆ ತನ್ನ ನಂಬಿಕೆಯನ್ನು ಬಿಡದೆ ಒಲೆಯ ಮೇಲಿಟ್ಟು ಬೇಯಿಸುವರೆಗಿನ ಎಲ್ಲ ಕೆಲಸ ಮಾಡಿ ಕೊಟ್ಟು, ಗಂಡನ ಭಾವನೆಗೆ ಅಷ್ಟರ ವರೆಗಿನ ಸತಿ ಧರ್ಮವನ್ನು ಪಾಲನೆ ಮಾಡಿದ್ದಾಳೆ.
ಕೇರಿಯ ಯಾರದೇ ಬಾಯಲ್ಲೂ ತನ್ನ ಬಗ್ಗೆ ಬೇಡದೆ ಇರುವ ಒಂದೇ ಒಂದು ಮಾತನ್ನು ಆಡಿಸಿ ಕೊಳ್ಳದ ರೀತಿಯಲ್ಲಿ ಬದುಕಿದ್ದಾಳೆ. ಒಮ್ಮೆ ಕೆರೆಮನೆಯ ಅವರ ಸಂಬಂಧಿ ಸುಬ್ಬಟ್ಟರು ಮನೆಗೆ ಬಂದು ಚಾ ಮಾಡಿಸಿ ಕುಡಿದು ಹೋಗಿದ್ದರು. ಭವಿಷ್ಯ ಅವರ ಅಂತರಂಗದ ಒಳಗೆ ಎಲ್ಲೋ ಇವಳ ಕುರಿತಾದ ಪ್ರಜ್ಞೆಯ ದೀಪವೊಂದು ಬೆಳಗಿರಬೇಕು. ಹಾಗೆ ಅವರಿಗೆ ಇವಳ ಮೇಲಿರುವ ಪ್ರೀತಿಗೆ ಸಾಕ್ಷಿಯು ಹೌದು.
ಎಂತದೇ ಸಿಟ್ಟು ಬಂದಾಗಲು ಎಲ್ಲಿಯೂ ನಮಗ್ಯಾರಿಗೂ ಕೆಟ್ಟಪದ ಇಲ್ಲಿಯ ತನಕವೂ ಅವಳ ಬಾಯಿಂದ ಬಂದಿಲ್ಲ, ತನ್ನ ಮಕ್ಕಳಿಗೆ ಬೈದಿರಬಹುದು. ನಮ್ಮ ಮನೆಯ ಯಾವುದೇ ಕಾರ್ಯ ಇರಲಿ ಊರಿನ ಒಂದಿಷ್ಟು ಮನೆಗೆ ಹೋಗಿ ಹೇಳಿ ಬರಬೇಕು ಎಂದಾಗಲು ಎಲ್ಲಿಯೂ ಅನ್ಯತಾ ಭಾವಿಸದೆ, ಹೋಗಲಾರೆ ಎನ್ನದೇ, ತನ್ನ ಮನೆಯ ಕಾರ್ಯ ಎನ್ನುವ ಭಾವನೆಯಿಂದ ಮನೆಮನೆಗೆ ಕರೆಯುವುದಕ್ಕೆ ಹೋಗಿದ್ದಾಳೆ.
ಕುವೆಂಪು ಹೇಳುತ್ತಾರೆ,
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?
ನಿನ್ನೆದೆಯ ದನಿಯೆ ಋಷಿ!
ಮನು ನಿನಗೆ ನೀನು! ಎಂದು.
ನಿಜ ಮನುಷ್ಯ ದೇವರಾಗುವುದು, ಮಹಾತ್ಮನಾಗುವುದು, ಎಲ್ಲವು ಅವನ ಅಂತರಂಗದಲ್ಲಿ ನೆಲೆನಿಂತ ಅನನ್ಯವಾದ ಮಾನವ ಪ್ರೇಮದಿಂದ, ನಾವು ಮಾಡಿಕೊಂಡ ಅಥವಾ ಮಾಡಿಟ್ಟ ಜಾತಿಗಿಂತ ಮಿಗಿಲಾಗಿ ನಿಂತಿರುವುದು ಅಂತರಂಗದಲ್ಲಿ ನೆಲೆ ನಿಂತ ಮಿಗಿಲಾದ ಮಾನವೀಯತೆಯಿಂದ. ತನ್ನ ಹೃದಯದೊಳಗಿನ ಶ್ರೇಷ್ಠತೆಗೆ ಮಹತ್ವ ಕೊಟ್ಟವರು, ಸತ್ತರು, ಸಾಯದೇ ನಿಂತಿದ್ದಾರೆ. ಎಲ್ಲಿಯ ತನಕ ? ಸೂರ್ಯಚಂದ್ರರು ಇರುವ ತನಕ.!
ಪುರಂದರ ದಾಸರು ಹೇಳುವ ಹಾಗೆ "ಇಂಥ ಹೆಣ್ಣಿನ ಸಂತತಿ ಸಾವಿರವಾಗಲಿ "ಮಾನವತೆಯೇ ಮಿಗಿಲು ಎನ್ನುವುದನ್ನು ತನ್ನ ಬದುಕಿನಲ್ಲಿ ತೋರಿಸಿ ಕೊಟ್ಟ ನಿನಗೆ ನನ್ನದೊಂದು ಸಲಾಂ.
ಮನುಷ್ಯನ ಬದುಕು ಅರ್ಥಪೂರ್ಣ ಎನ್ನುವುದು ಯಾವಾಗ ಎನ್ನುವ ಪ್ರಶ್ನೆಗೆ ಇವಳು ಒಂದು ಉದಾಹರಣೆ.
ಹೆಣ್ಣಿನ ಗುಣ ಸಾಕ್ಷಿಗೆ ಈ ನೆಲ ಏನೆಲ್ಲಾವನ್ನು ಕೊಟ್ಟಿದೆಯೋ ಅವೆಲ್ಲವೂ ಅವಳ ಹೊಗಳಿಕೆ ಆಗಿರದೆ ವಾಸ್ತವದಲ್ಲಿ ಅವಳು ಅದೇ ಆಗಿದ್ದಾಳೆ ಎನ್ನುವುದನ್ನು ಈ ಪುರುಷ ಸಮಾಜ ಮರೆಯಬಾರದು.
ಹೆಣ್ಣಿಗೆ ಗೌರವ, ಮರ್ಯಾದೆ ಕೊಡದ ಯಾವ ನೆಲವು ಉದ್ದಾರ ಆದ ಇತಿಹಾಸ ಇಲ್ಲ. ನಾವು ಕಲಿಯೋಣ, ಮಾನವತೆಗೆ ಸಾಕ್ಷಿಯಾಗೋಣ. ಒಂದು ಅರ್ಥದಲ್ಲಿ ಇವಳ ಜೀವನ ಸಾಧನೆಯು ಆಗಿ ನಿಲ್ಲುತ್ತದೆ. ಜೀವನ ಅಂದ್ರೆ ಏನು? ಅಂತ ಕೇಳಿದ್ರೆ ಹೇಳಲಿಕ್ಕೆ ಇವಳಿಗೆ ಬರದೆ ಇರಬಹುದು. ಆದರೆ ಜೀವನ ಅಂದ್ರೆ ಹೀಗೆ ಇರಬೇಕು ಅಂತ ನಡೆದು ತೋರಿಸಿದ್ದಾಳೆ. ಇದೆ ಶ್ರೇಷ್ಠ ಅಲ್ಲವೇ?
ಜನ್ಮದ ಶ್ರೇಷ್ಠತೆ ಹುಟ್ಟಿದ ಜಾತಿಯಿಂದ ಅಲ್ಲ. ನಡೆದ ದಾರಿಯಿಂದ, ಬದುಕಿದ ರೀತಿಯಿಂದ.
ಹಳ್ಳಿ (ಸುದ್ದಿ ) ನ್ಯೂಸ್
ಭಾವ ಶುದ್ಧಿ.
0 Comments:
ಕಾಮೆಂಟ್ ಪೋಸ್ಟ್ ಮಾಡಿ