ಭಾರತದಲ್ಲಿ ಆಚರಣೆಗಳು ನೆಲಮೂಲ ಸಂಸ್ಕೃತಿಯನ್ನು ಬಿಂಬಿಸುತ್ತಲೇ ಇರುತ್ತದೆ. ನಾವೇನು ಈಗ ಆಧುನಿಕತೆ ಎಂದು ಬೊಬ್ಬೆಹೊಡೆದರೂ, ಹೊಸ ಪ್ಯಾಶನ್ನಿನ ಒಳಗೆ ಆಚರಣೆ ಮೈದಳೆಯುತ್ತಲೇ ಇರುತ್ತದೆ. ಆಚರಣೆಗಳು ನಮ್ಮ ಬದುಕಿನ ಬಗೆಗಿನ ಒಳನೋಟಗಳನ್ನ ನೀಡುತ್ತಲೇ ಇರುತ್ತದೆ. ಸನಾತನ ಆಚರಣೆಗಳು ನಮ್ಮ ಬದುಕಿಗೊಂದು ಚೈತನ್ಯ ನೀಡುತ್ತಲೇ ಇರುತ್ತದೆ. ಆಚರಣೆಯ ಒಳಗುಟ್ಟು ತನಗೆ ತಿಳಿದಿದೆ ಎನ್ನುವವರು ಹಲವರಿದ್ದರೂ, ಅದನ್ನ ತಿಳಿದವರು ಬಹಳ ವಿರಳವೆ. ಬಹುಶಃ ಯಾವುದೋ ಕಾರಣಕ್ಕೆ, ಇನ್ನೇನನ್ನೋ ಉಳಿಸುವ, ನೆನಪಿಸುವ ಘನ ಕಾರ್ಯಕ್ಕಾಗಿ ಆಚರಣೆಗಳನ್ನ ನಡೆಸಲಾಗುತ್ತಿದೆ, ಇದು ಮಾತ್ರ ಸುಳ್ಳಲ್ಲ ಎನ್ನಬುದು. ಇಂತಹ ಹಲವಾರು ಆಚರಣೆಗಳ ಪೈಕಿ ಕಾರ್ತಿಕ ಮಾಸದ ಆಚರಣೆಯೂ ಒಂದು, ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಇದರ ಆಚರಣೆ ವಿಶಿಷ್ಟ. ತನ್ನಿಮಿತ್ತ ಈ ಲೇಖನ, ಓದಿ ನಿಮ್ಮ ಅಭಿಪ್ರಾಯ ತಿಳಿಸಲು ಮತ್ತು ಹಂಚಿಕೊಳ್ಳಲು ವಿನಂತಿಸಿದೆ
ಕಾರ್ತಿಕ ಮಾಸ ಕಳೆದ ಮೇಲೆ ಬರುವ ಮಾರ್ಗಶಿರ ಮಾಸದಲ್ಲಿ, ದೇವ, ದೈವ ಸಾನಿಧ್ಯದಲ್ಲಿ ವನಭೋಜನವೆಂಬ ಧಾರ್ಮಿಕ ಆಚರಣೆ ನಡೆಯುತ್ತದೆ. ಹಿಂದೆಲ್ಲ ವನ, ಅಂದರೆ ಗಿಡ ಮರಗಳಿಂದ ಕೂಡಿದ ಸ್ಥಳಗಳೆ ಹೆಚ್ಚಿಗೆ ಇದ್ದಿದರಿಂದ, ದೇವ, ದೈವ ಸಾನಿಧ್ಯದ ಸುತ್ತ ಮುತ್ತಲು ವನಗಳು ಇರುವುದರಿಂದ ವನಗಳಿಂದ ಕೂಡಿದ ದೈವ ಸಾನಿಧ್ಯದಲ್ಲಿ ನಡೆಯುವ ಭೋಜನ ಆಗಿರುವುದರಿಂದ ಅದು ವನಭೋಜನ ಎಂದಾಗಿದೆ. ಊರಿನ ಪ್ರಧಾನ ದೇವಾಲಯದ ಉತ್ಸವ ಮೂರ್ತಿ ಪಲ್ಲಕ್ಕಿಯ ಮೂಲಕ ಊರಿನ ಸುತ್ತಮುತ್ತಲ ದೇವಾಲಯಕ್ಕೆ ಹೋಗಿ ಅಲ್ಲಿ ಪೂಜಿಸಲ್ಪಡುವ ಆಚರಣೆ ಒಂದೆಡೆಯಾದರೆ, ಊರಲ್ಲೇ ಇರುವ ದೇವಾಲಯದಲ್ಲೂ ವನಭೋಜನ ನಡೆಯುತ್ತದೆ. ಇದೊಂದು ಗ್ರಾಮೀಣ ಭಾಗದ ಎಲ್ಲ ಜಾತಿ ಜನಾಂಗದ ಸಹಭೋಜನದ ಆಚರಣೆ.ಈ ದಿನ ಒಂದು ಮನೆಗೆ ಇಂತಿಷ್ಟು ಅಕ್ಕಿ ಹಾಗೂ ಕಾಯಿ ಕೊಡಬೇಕು ಎಂದು ತೀರ್ಮಾನ ಗ್ರಾಮದ ಅಥವಾ ದೈವ ಸಾನಿಧ್ಯದ ಪ್ರಧಾನರು ನಿರ್ಧಾರ ಮಾಡುತ್ತಾರೆ. ಆಯಾ ಕೇರಿಯ ವಂತಿಕೆಯನ್ನು ಸಂಗ್ರಹ ಮಾಡಲು ಇರುವವರು, ಎಲ್ಲವನ್ನು ತಂದು ದೇವಾಲಯಕ್ಕೆ ಅಥವಾ ಗ್ರಾಮದ ಪ್ರಧಾನರಿಗೆ ತಂದು ಮುಟ್ಟಿಸುತ್ತಾರೆ. ಮಾತ್ರವಲ್ಲ ಕನಿಷ್ಠ ಮನೆಗೆ ಒಬ್ಬರಾದರೂ ಭೋಜನಕ್ಕೆ ಬರಲೇ ಬೇಕು.
ಹಿಂದಿನಿಂದಲೂ ನಡೆದು ಬಂದ ಪದ್ದತಿಯ ಆಚರಣೆ ಇದಾಗಿರುವುದರಿಂದ ಎಲ್ಲರೂ ಭಾಗಿಯಾಗುತ್ತಾರೆ. ಬಹಳ ವಿಶೇಷವಾಗಿ ನಡೆಯುವ ಆಚರಣೆಯಾಗಿ, ಊರಿನ ಎಲ್ಲರೂ ದೇವರ ಉತ್ಸವದ ಹೆಸರಿನಲ್ಲಾದರೂ ಸೇರುವ, ಕೂಡಿ ಊಟ ಮಾಡುವ ಸಂದರ್ಭ ಏರ್ಪಡುತ್ತಿತ್ತು. ಪರಸ್ಪರ ವೈಮನಸು ಮರೆತು ಏಕತೆಯ ಭಾವ ಪ್ರಕಟಣೆಗೆ, ಒಗ್ಗಟ್ಟಿನ ಕಾರ್ಯ ಸಾಧನೆಗೆ ದಾರಿಯಗುತ್ತಿತ್ತು.ಮಾತ್ರವಲ್ಲ ಊರಿನ ಸುಖ ಶಾಂತಿ, ಬೆಳೆ, ಬೇಸಾಯದ ಉನ್ನತಿಗೆ ಇದು ಕಾರಣವಾಗುತ್ತದೆ ಎನ್ನುವ ಬಲವಾದ ಭಕ್ತಿಯ ನಂಬಿಕೆಯು ಮನೆ ಮಾಡಿತ್ತು. ದೈವ ಸಾನಿಧ್ಯದಲ್ಲಿ ಪೂಜೆಯ ಸಂದರ್ಭದಲ್ಲಿ ಊರಿನ ಸಮಸ್ತರ, ಬೆಳೆ ಬೇಸಾಯದ, ಸಾಕು ಪ್ರಾಣಿ ಮರಿ ಮಕ್ಕಳ ಕುರಿತಾಗಿ ವಿಶೇಷ ಪ್ರಾರ್ಥನೆ ನಡೆಯುತ್ತಿತ್ತು. ಪಲ್ಲಕ್ಕಿ ಹೋಗುವ ಮಾರ್ಗದುದ್ದಕ್ಕೂ ಪೂಜೆ ಕೊಡುವವರು, ಅಶ್ವಥ್ ಕಟ್ಟೆಯ ಮೇಲೆ ಕುಳ್ಳಿಸಿ ವಿಶೇಷ ಸೇವೆ ಸಲ್ಲಿಸುವವರು ಸೇವಾ ಕಾರ್ಯ ಮಾಡುತ್ತಿದ್ದರು.
ಪಂಚವಾದ್ಯದೊಂದಿಗೆ, ಪಲ್ಲಕ್ಕಿ ಹೋಗುವ ಮಾರ್ಗದುದ್ದಕ್ಕೂ ಹೂಕಾಯಿ ಹಣ್ಣುಗಳನ್ನು ಹಿಡಿದು ಕೇರಿಯ ಮಹಿಳೆಯರು ಮಕ್ಕಳು ಗಂಡಸರೆಲ್ಲ ಅಲ್ಲಲ್ಲಿ ಗುಂಪು ಗುಂಪಾಗಿ ಪೂಜೆ ಕೊಡುವವರು ಕಾಯುತ್ತಿರುತ್ತಾರೆ . ತಾವು ದೇವರ ಪಲ್ಲಕ್ಕಿಯನ್ನು ನಿಲ್ಲಿಸಿ ಪೂಜೆ ಕೊಡುವ ಸ್ಥಳವನ್ನು ಸಗಣಿಯಿಂದ ಸಾರಿಸಿ ಸೇಡಿಯಿಂದ ರಂಗೋಲಿ ಹಾಕಿ ಶುಭ್ರವಾಗಿ ಇಡುತ್ತಾರೆ. ಮಾತ್ರವಲ್ಲ ಅಶ್ವಥ ಕಟ್ಟೆಯ ಮೇಲೆ ಕುಳ್ಳಿಸಿ ವಿಶೇಷ ಪೂಜಾ ಸೇವೆ ಸಲ್ಲಿಸುವವರು ಸೇವಾ ಕಾರ್ಯ ಮಾಡುತ್ತಾರೆ. ಪಂಚ-ಕಜ್ಜಾಯ, ಬೆಲ್ಲದ ಪಾನಕ ಮಾಡಿ ದೇವರಿಗೆ ನೈವೇದ್ಯಕ್ಕೆ ಇಟ್ಟು ನಂತರ ನೆರೆದವರಿಗೆ ನೀಡುತ್ತಾರೆ.
ಈ ವನಭೋಜನ ಕಾರ್ತೀಕ ಮಾಸದ ನಂತರ ಬರುವ ಮಾರ್ಗಶಿರ ಮಾಸದಲ್ಲಿ ಆಗುವುದರ ಹಿಂದೆ ಕೆಲವು ತಿಳಿದು ಕೊಳ್ಳಬೇಕಾದ ಸಂಗತಿ ಇದೆ. ಈ ಸಮಯದಲ್ಲಿ ಕಾತಗಿ ಬೆಳೆ ಮನೆಗೆ ಬಂದಿರುತ್ತದೆ. ಬೆಳೆಗೆ ಕಾರಣ ಆಗಿದ್ದು ಉತ್ತಮ ಮಳೆ. ಉತ್ತಮ ಮಳೆ ಆಗಲೂ ಮುಖ್ಯ ಕಾರಣ ವನ. ಹಾಗಾಗಿ ತಾನು ಧಾನ್ಯವನ್ನು ಅಥವಾ ಕೃಷಿ ಮಾಡಲು ಕಾರಣವಾದ ವನದೇವತೆಯನ್ನು, ದೇವಾನು ದೇವತೆಗಳನ್ನು ವನಗಳನ್ನು ಪೂಜಿಸಿ, ಕೃತಜ್ಞತೆ ಅರ್ಪಿಸುವ ಕಾಲವು ಹೌದು. ಅಲ್ಲದೆ ಮುಂದಿನ ಸುಗ್ಗಿ ಬೆಳೆ ಈ ಮಾರ್ಗಶಿರ ಮಾಸದಿಂದಲೇ ಮತ್ತೆ ಪ್ರಾರಂಭ ಆಗುತ್ತದೆ. ಈಗ ಈ ಆಚರಣೆಯ ಹಿಂದಿರುವ ಸಂಬಂಧವನ್ನು ತಿಳಿದಾಗ ನಮ್ಮ ತಿಳುವಳಿಕೆ, ಪ್ರಜ್ಞೆ, ಉಪಕಾರ ಸ್ಮರಣೆ ಎಷ್ಟು ಸೌಜನ್ಯವಾದುದ್ದು. ಈ ನಾಡಿನ ಮಣ್ಣಿನ ಸಂಸ್ಕೃತಿ, ಸಂಸ್ಕಾರ ಎಷ್ಟು ಅದಮ್ಯ ಆಗಿದ್ದು ಎನ್ನುವುದು ತಿಳಿದು ಬರುತ್ತದೆ. ಭಾರತದ ಕಣ ಕಣದಲ್ಲೂ ದೇವರನ್ನು ಪ್ರತಿ ಸಂದರ್ಭದಲ್ಲಿಯು ಗೌರವ ಸಲ್ಲಿಸುವುದನ್ನು ಕಾಣಬಹುದಾಗಿದೆ
ಭಾರತೀಯ ಸಂಪ್ರದಾಯಕಾರ್ತಿಕ ಮಾಸಮಾರ್ಗಶಿರ ಮಾಸವನಭೋಜನದೈವ ಸಾನಿಧ್ಯಗ್ರಾಮೀಣ ಆಚರಣೆಸನಾತನ ಪದ್ಧತಿಭಾರತೀಯ ಸಂಸ್ಕೃತಿಹೊನ್ನಾವರ ತಾಲೂಕುಗುಣವಂತೆಪಲ್ಲಕ್ಕಿ ಉತ್ಸವಸಹಭೋಜನಕೃಷಿ ಸಂಸ್ಕೃತಿ
0 Comments:
ಕಾಮೆಂಟ್ ಪೋಸ್ಟ್ ಮಾಡಿ